Advertisement

4 ಸಾವಿರ ಶಾಲೆಗಳಲ್ಲಿ ಬಯಲೇ ಶೌಚಾಲಯ!

01:26 AM May 09, 2019 | sudhir |

ಬೆಂಗಳೂರು: ರಾಜ್ಯದ ಸುಮಾರು ನಾಲ್ಕು ಸಾವಿರ ಶಾಲೆಗಳಲ್ಲಿ ಇಂದಿಗೂ ಬಯಲೇ ಶೌಚಾಲಯ…!

Advertisement

ಹೌದು, ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿರುವ 2018-19ನೇ ಸಾಲಿನ ಶೈಕ್ಷಣಿಕ ವರದಿಯಲ್ಲಿ ಈ ಆಘಾತಕಾರಿ ಅಂಶ ಬಯಲಿಗೆ ಬಂದಿದೆ. ರಾಜ್ಯದ ಒಟ್ಟು 43,492 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ 2,794 ಶಾಲೆಗಳಲ್ಲಿ ಬಾಲಕರಿಗೆ ಮತ್ತು 1,288 ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳೇ ಇಲ್ಲ.

4,696 ಪ್ರೌಢಶಾಲೆಗಳ ಪೈಕಿ 153 ಶಾಲೆಗಳಲ್ಲಿ ಬಾಲಕರಿಗೆ ಶೌಚಾಲಯ ಹಾಗೂ 64 ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳಿಲ್ಲ. ಹೀಗಾಗಿ ಇವರೆಲ್ಲರೂ ಇನ್ನೂ ಶೌಚಾಲಯಕ್ಕೆ ಬಯಲನ್ನೇ ಅವಲಂಬಿಸಿಕೊಂಡಿದ್ದಾರೆ. ಇನ್ನೇನು ಮುಂಗಾರು ಮಳೆ ಆರಂಭವಾಗುವ ಹೊತ್ತಿಗೆ 2019-20ನೇ ಸಾಲಿನ ಶೈಕ್ಷಣಿಕ ವರ್ಷವೂ ಆರಂಭವಾಗುತ್ತಿದೆ. ಈ ಹೊತ್ತಲ್ಲೇ ಇಂಥ ವರದಿ ಹೊರಬಿದ್ದಿದೆ.

ಆಟದ ಮೈದಾನವೂ ಇಲ್ಲ

ರಾಜ್ಯದ 18,669 ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ 717 ಪ್ರೌಢಶಾಲೆಗಳಲ್ಲೂ ಮಕ್ಕಳಿಗೆ ಆಟದ ಮೈದಾನವೇ ಇಲ್ಲ. 30,407 ಸರಕಾರಿ ಪ್ರಾಥಮಿಕ ಶಾಲೆ ಮತ್ತು 3,088 ಪ್ರೌಢಶಾಲೆಗಳಲ್ಲಿ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿಲ್ಲ. ಕಲಿಕೆಗೆ ಪೂರಕವಾಗಿರುವ ಪುಸ್ತಕಗಳ ಆಲಯವೇ ಸರಕಾರಿ ಶಾಲೆಗಳಲ್ಲಿ ಇಲ್ಲದಿರುವುದು ವಿಪರ್ಯಾಸ.

Advertisement

ಸ.ಪ್ರಾ. ಶಾಲೆಗಳಲ್ಲಿ 2,08,681 ಕೊಠಡಿಗಳಿದ್ದು, 1,37,392 ಉತ್ತಮ, 27,445 ಸಣ್ಣ ಪ್ರಮಾಣ ಮತ್ತು 43,844 ದೊಡ್ಡ ಪ್ರಮಾಣದ ದುರಸ್ತಿಗೆ ಅಗತ್ಯವಿರುವವು. ಸರಕಾರಿ ಪ್ರೌಢಶಾಲೆಗಳ 23,318 ಕೊಠಡಿಗಳಲ್ಲಿ 11,601 ಉತ್ತಮ, 1,727 ಸಣ್ಣ ಮತ್ತು 9,990 ದೊಡ್ಡ ಪ್ರಮಾಣದ ದುರಸ್ತಿ ಅಗತ್ಯವಿರುವು ಎಂಬುದು ಶೈಕ್ಷಣಿಕ ವರದಿಯಲ್ಲಿ ಉಲ್ಲೇಖವಾಗಿದೆ.

2019-20ನೇ ಸಾಲಿಗೆ ದಾಖಲಾತಿ ಆರಂಭ ವಾಗಿದೆ. ಆದರೆ ಶೌಚಾಲಯ, ಕುಡಿಯುವ ನೀರು, ಮೈದಾನ, ಗ್ರಂಥಾಲಯ ಇತ್ಯಾದಿಗಳನ್ನು ಸಮರ್ಪಕ ವಾಗಿ ಒದಗಿಸದಿದ್ದರೆ ಪಾಲಕ, ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುವುದರಲ್ಲಿ ಸಂಶಯವೇ ಇಲ್ಲ.

ಶಿಕ್ಷಕರೂ ಇಲ್ಲ

ಶಿಕ್ಷಕರ ಕೊರತೆಯನ್ನು ನೀಗಿಸಲು ಇನ್ನೂ ಸಾಧ್ಯವಾಗಿಲ್ಲ. ಪ್ರಾಥಮಿಕ ಶಾಲೆಗೆ 1,91,387 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 1,60,572 ಹುದ್ದೆಗಳಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ 30,815 ಹುದ್ದೆ ಖಾಲಿ. ಸುಮಾರು 10 ಸಾವಿರ ಪದವೀಧರ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರೌಢಶಾಲೆಗೆ 39,332 ಹುದ್ದೆ ಮಂಜೂರಾಗಿದ್ದು, 35,961 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 3,371 ಹುದ್ದೆಗಳು ಖಾಲಿಯಾಗಿವೆ. ಇದು ಸರಕಾರಿ ಶಾಲೆಯ ಸ್ಥಿತಿಯಾದರೆ, ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, ಸ್ಥಳೀಯ ಸಂಸ್ಥೆಗಳ ಶಾಲೆಗಳು, ಕೆಲವು ಅನುದಾನಿತ ಶಾಲೆಗಳ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next