ಮುಂಬಯಿ: ಎಲ್ಫಿನ್‌ಸ್ಟನ್ ಕಾಲು¤ಳಿತದ ಬಳಿಕ ಲೋಕಲ್ ರೈಲು ಸೇವೆ ಸುಧಾರಣೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಅರಬಿ ಸಮುದ್ರದಲ್ಲಿ ಶಿವಾಜಿ ಸ್ಮಾರಕ ನಿರ್ಮಿಸಲು ಖರ್ಚು ಮಾಡುವ 3,600 ಕೋ. ರೂ.ವನ್ನು ಮುಂಬಯಿಯ ಲೋಕಲ್ ರೈಲು ಸೇವೆ ಸುಧಾರಿಸಲು ಬಳಸಿಕೊಳ್ಳಿ ಎಂದು ಆನ್‌ಲೈನ್ ಅರ್ಜಿಯೊಂದರಲ್ಲಿ ಸರಕಾರವನ್ನು ಆಗ್ರಹಿಸಲಾಗಿದೆ. ಮೂರೇ ದಿನದಲ್ಲಿ ಈ ಅರ್ಜಿಗೆ 25,000ಕ್ಕೂ ಹೆಚ್ಚಿನ ಜನರ ಬೆಂಬಲ ಸಿಕ್ಕಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಆನ್‌ಲೈನ್ ಅರ್ಜಿ ವೈರಲ್ ಆಗಿದೆ. ವಿಪಿನ್ ವಿಜಯನ್ ಎಂಬವರು ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಪಿಯೂಷ್‌ಗೋಯಲ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಈ ಮನವಿ ಬರೆದಿದ್ದಾರೆ.
ಮುಂಬಯಿಯ ಲೋಕಲ್ ರೈಲು ಸೇವೆ ಉತ್ತಮ ಪಡಿಸುವ ಬೇಡಿಕೆ ಕೇಳಿ ಬಂದಾಗಲೆಲ್ಲ ಸರಕಾರ ಹಣಕಾಸಿನ ಕೊರತೆಯಿದೆ ಎಂದು ಸಬೂಬು ಹೇಳುತ್ತಿದೆ. ಆದರೆ ಅರಬಿ ಸಮುದ್ರದ ನಡುವೆ ಶಿವಾಜಿಯ ಸ್ಮಾರಕ ನಿರ್ಮಿಸಲು 3,600 ಕೋ. ರೂ. ಮಂಜೂರು ಮಾಡಿದೆ. ಇದು ಜನರ ತೆರಿಗೆ ಹಣವನ್ನು ಗಟಾರಕ್ಕೆ ಚೆಲ್ಲಿದಂತೆ. ಸ್ಮಾರಕದಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ಆಗಬೇಕಿರುವುದು ಜನಸಾಮಾನ್ಯರ ಓಡಾಟದ ಮಾಧ್ಯಮ ವಾಗಿರುವ ಲೋಕಲ್ ರೈಲು ಸೇವೆಯ ಸುಧಾರಣೆ ಎಂದು ವಿಪಿನ್ ವಿಜಯನ್ ಈ ಅರ್ಜಿಯಲ್ಲಿ ಹೇಳಿದ್ದಾರೆ.
ಸ್ಮಾರಕ ನಿರ್ಮಿಸದಿದ್ದರೂ ಶಿವಾಜಿ ಮಹಾರಾಜ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾನೆ. ಆದರೆ ಮೊದಲು ಆಗಬೇಕಿರುವುದು ಜನರ ಅಮೂಲ್ಯ ಪ್ರಾಣಗಳನ್ನು ಉಳಿಸುವ ಕೆಲಸ. ಎಲ್ಲಿಯಾದರೂ ಶಿವಾಜಿ ಮಹಾರಾಜ ಇಂದು ಬದುಕಿದ್ದರೆ ನನಗಾಗಿ ಸ್ಮಾರಕ ನಿರ್ಮಿಸಬೇಡಿ, ಆ ಹಣವನ್ನು ಜನರ ಪ್ರಾಣ ಉಳಿಸಲು ಉಪಯೋಗಿಸಿ ಎಂದು ಹೇಳುತ್ತಿದ್ದ ಎಂದು ವಿಪಿನ್ ವಿಜಯನ್ ಹೇಳಿದ್ದಾರೆ.
ಇನ್ನೊಂದು ಆನ್‌ಲೈನ್ ಮನವಿಯಲ್ಲಿ ಬುಲೆಟ್ ಟ್ರೈನ್‌ಗಿಂತ ಮುಂಬಯಿಯ ಕಿಕ್ಕಿರಿದು ತುಂಬುವ ಲೋಕಲ್ ರೈಲು ಸೇವೆಯನ್ನು ಮೇಲ್ದರ್ಜೆಗೇರಿಸುವುದು ಮೊದಲ ಆದ್ಯತೆಯಾಗಬೇಕೆಂದು ಹೇಳಿದೆ. ಶ್ರೇಯಾ ಚವಾಣ್ ಎಂಬ 12ನೇ ತರಗತಿ ವಿದ್ಯಾರ್ಥಿನಿ ಮುಖ್ಯಮಂತ್ರಿಗೆ ಮಾಡಿರುವ ಮನವಿಯಲ್ಲಿ ಬುಲೆಟ್ ರೈಲು ಬೇಡ ಉತ್ತಮ ಲೋಕಲ್ ರೈಲುಗಳ ಕೊಟ್ಟರೆ ಸಾಕು ಎಂದಿದ್ದಾಳೆ. ಇದಕ್ಕೆ ಸುಮಾರು 12,000 ಮಂದಿ ಸಹಿ ಹಾಕಿದ್ದಾರೆ.