Advertisement

ಪೊಲೀಸ್ ವಿರುದ್ಧ ವಿಚಾರಣೆ ತಡೆಗೆ ನಕಾರ

07:00 AM Jan 10, 2019 | Team Udayavani |

ಬೆಂಗಳೂರು: ವ್ಯಕ್ತಿಯೊಬ್ಬನಿಗೆ ಕಳ್ಳತನ ಮಾಡುವಂತೆ ಸಂಚು ರೂಪಿಸಿಕೊಟ್ಟ, ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತ ‘ಪೊಲೀಸಪ್ಪನ’ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ವೈದ್ಯರೊಬ್ಬರ ಮನೆಯಲ್ಲಿ ಎಂಟು ಲಕ್ಷ ರೂ. ಕಳ್ಳತನ ಮಾಡಿಸಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ನಗರದ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಪೊಲೀಸ್‌ ಅಧಿಕಾರಿ ಬಿ.ಕೆ. ಮಧುಸೂಧನ್‌ ಸಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್‌. ದಿನೇಶ್‌ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.

ವಿಚಾರಣೆ ವೇಳೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತು. ಈ ಮಧ್ಯೆ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿದರು. ಆದರೆ, ನ್ಯಾಯಪೀಠ ಅದನ್ನು ತಿರಸ್ಕರಿಸಿತು.

ಪ್ರಕರಣ ಹಿನ್ನೆಲೆ: ಬನಶಂಕರಿ 3ನೇ ಹಂತದ ಐಟಿಐ ಲೇಔಟ್‌ನ ಈಸ್ಟ್‌ ಮುಖ್ಯ ರಸ್ತೆಯಲ್ಲಿರುವ ವೈದ್ಯ ಸಿ.ಕೆ.ಆದರ್ಶ್‌ ಮನೆಯಲ್ಲಿ 2018ರ ಫೆ.26ರಂದು ಆರ್ಮುಗಂ ಎಂಬಾತ ಸುಮಾರು 8 ಲಕ್ಷ ನಗದು, 30 ಗ್ರಾಮ ಚಿನ್ನದ ನಾಣ್ಯ ಮತ್ತು ಫಾರಿನ್‌ ಕರೆನ್ಸಿ ಕಳ್ಳತನ ಮಾಡಿದ್ದ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಆರ್ಮುಗಂನನ್ನು ಬಂಧಿಸಿದ್ದರು.

ಪೊಲೀಸ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಅರ್ಮುಗಂ ಪೊಲೀಸ್‌ ಅಧಿಕಾರಿ ಬಿ.ಕೆ. ಮಧುಸೂಧನ್‌ ಹಾಗೂ ಕಾರ್ಮಿಕ ಲಕ್ಷ್ಮಣ್‌ ತನಗೆ ಪರಿಚಯಸ್ಥರು. ಒಂದು ದಿನ ಅವರು ನನ್ನನ್ನು ಅನ್ನಪೂರ್ಣೇಶ್ವರಿನಗರದ ವೃತ್ತದ ಬಳಿ ಕರೆಸಿಕೊಂಡು, ‘ಸಣ್ಣ ಮನೆಗಳಲ್ಲಿ ಕಳ್ಳತನ ಮಾಡಿ ಎಷ್ಟು ದಿನ ಅಂತ ಹೀಗೆ ಇರ್ತಿಯಾ? ಮಾಡುವುದಿದ್ದರೆ ದೊಡ್ಡ ಮನೆಗಳನ್ನು ಹುಡುಕಿ ಕಳ್ಳತನ ಮಾಡಿ ಸಿಕ್ಕಿದ್ದನ್ನು ನಮಗೆ ತಂದು ಕೊಡು ಎಲ್ಲರೂ ಸೇರಿ ಹಂಚಿಕೊಂಡು ಜೀವನದಲ್ಲಿ ‘ಸೆಟಲ್‌’ ಆಗಿ ಬಿಡೋಣ. ಒಂದೊಮ್ಮೆ ನೀನು ಸಿಕ್ಕಿ ಬಿದ್ದರೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಕುಮ್ಮಕ್ಕು ನೀಡಿದ್ದರು ಎಂದು ಆರ್ಮುಗಂ ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ಪೊಲೀಸರು ಮಧಸೂಧನ್‌ ಹಾಗೂ ಲಕ್ಷ್ಮಣ್‌ ವಿರುದ್ಧ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣ ಸದ್ಯ ನಗರದ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಮಧುಸೂದನ್‌ ಮೂರನೇ ಆರೋಪಿಯಾಗಿದ್ದಾರೆ. ಈ ಮಧ್ಯೆ ಹೈಕೋರ್ಟ್‌ ಮೆಟ್ಟಿಲೇರಿದ ಮಧುಸೂಧನ್‌, ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆಧಾರರಹಿತವಾಗಿ ಎಫ್ಐಆರ್‌ ದಾಖಲಿಸಲಾಗಿದೆ. ಹೀಗಾಗಿ ತನ್ನ ವಿರುದ್ಧ ಪ್ರಕರಣ ರದ್ದುಪಡಿಸುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next