ರಾಯಚೂರು: ಜನವರಿ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಅನೇಕ ಶಾಸಕರು ಬಿಜೆಪಿಗೆ ಬರುತ್ತಾರೆ. ಆದರೆ, ಟಿಕೆಟ್ ಕೊಡುತ್ತೇವೆಂದು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕರ್ತರ ಸಲಹೆ ಸೂಚನೆ ಪಡೆದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಚರ್ಚಿಸಿದ ಬಳಿಕವೇ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುವುದು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಬಿಜೆಪಿಯ ಅನೇಕ ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ಕೊಟ್ಟಿಲ್ಲ. ಅದೇ ರೀತಿ ಕರ್ನಾಟಕದಲ್ಲೂ ಇಂಥವರಿಗೇ ಟಿಕೆಟ್ ಎಂದು ಖಚಿತಗೊಳಿಸಿಲ್ಲ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುತ್ತೇವೆ ಎಂದರು.
ಜ.26ರಂದು ಹುಬ್ಬಳ್ಳಿಯಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಅಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದಲೂ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಅವುಗಳನ್ನೆಲ್ಲ ಕ್ರೋಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಜನರ ದುಡ್ಡಲ್ಲಿ ಕಾಂಗ್ರೆಸ್ ಪ್ರಚಾರ ಯಾತ್ರೆ:
ಈ ಮಧ್ಯೆ, ಮಾನ್ವಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪ್ರಚಾರ ಯಾತ್ರೆ ಮಾಡುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
“ಸಿದ್ದರಾಮಯ್ಯನವರು ನನ್ನನ್ನು ಜೈಲಿಗೆ ಹೋಗಿ ಬಂದವರೆಂದು ಹೇಳುತ್ತಿದ್ದಾರೆ. ಆದರೆ, ನನ್ನ ಮೇಲಿನ ಎಲ್ಲ ಆರೋಪಗಳ ಬಗ್ಗೆ ತನಿಖೆ ಆಗಿ ಕೋರ್ಟ್ ಕ್ಲೀನ್‌ಚಿಟ್ ನೀಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಒಂದು ತಿಂಗಳು ಜೈಲಲ್ಲಿದ್ದು ಬಂದಿದ್ದರು ಎಂಬುದು ಅವರಿಗೆ ಗೊತ್ತಿಲ್ಲವೇ? ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ , ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಕೂಡ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ವಕೀಲರೂ ಆದ ಸಿದ್ದರಾಮಯ್ಯರಿಗೆ ಇದ್ಯಾವುದೂ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.