Advertisement

ಬೇಸಿಗೆಗೆ ಇಲ್ಲ ಈ ಬಾರಿ ಬಾಯಾರಿಕೆ!

11:29 AM May 06, 2022 | Team Udayavani |

ಬಾಗಲಕೋಟೆ: ಪ್ರತಿವರ್ಷ ಬೇಸಿಗೆ ವೇಳೆ ಜಿಲ್ಲೆಯಲ್ಲಿ ಉಂಟಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ.

Advertisement

ಹೌದು, ಜಿಲ್ಲೆಯಲ್ಲಿ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ಮೂರು ನದಿಗಳು ಹರಿದಿದ್ದರೂ ಪ್ರತಿವರ್ಷ ಈ ಮೂರು ನದಿಗಳಿಗೆ ನೀರು ಬಿಡಿ ಎಂಬ ಕೂಗು ಬೇಸಿಗೆಯಲ್ಲಿ ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಅಂತಹ ಕೂಗು ಕೇಳಿ ಬಂದಿಲ್ಲ. ಜತೆಗೆ ಈ ನದಿ ಪಾತ್ರದ ಪ್ರಮುಖ ಡ್ಯಾಂ, ಬ್ಯಾರೇಜ್‌ಗಳಲ್ಲೂ ನೀರಿನ ಸಂಗ್ರಹವಿದ್ದು, ಸಕಾಲಕ್ಕೆ ನೀರು ಕೂಡ ಹರಿಸಲಾಗಿದೆ.

ಮಲಪ್ರಭೆಗೆ ಬಂದ ನೀರು: ಜಿಲ್ಲೆಯಲ್ಲಿ ಅತಿ ಬೇಗ ಬತ್ತುವ ನದಿಗಳಲ್ಲಿ ಮಲಪ್ರಭೆ ಕೂಡ ಒಂದು. ಕೃಷ್ಣೆಯಲ್ಲಿ ನಿರಂತರ ಬ್ಯಾಕ್‌ ವಾಟರ್‌ ಇರುತ್ತದೆ. ಘಟಪ್ರಭೆ ಪಾತ್ರದಲ್ಲೂ ಬಾಗಲಕೋಟೆ ಸುತ್ತಮುತ್ತ ಕೂಡ ನಿಲ್ಲುತ್ತದೆ. ಹೀಗಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊಂಚ ಕಡಿಮೆ.

ಆದರೆ, ಮಲಪ್ರಭಾ ನದಿ, ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಪ್ರವೇಶಿಸಿ, ಕೊನೆಗೆ ಕೂಡಲಸಂಗಮದಲ್ಲಿ ಕೂಡುವ ವರೆಗೂ ಸುಮಾರು 18 ಬ್ಯಾರೇಜ್‌ಗಳಿವೆ. ಅವುಗಳೆಲ್ಲ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಹೀಗಾಗಿ ನೀರು ಸಂಗ್ರಹಗೊಂಡರೂ ಅದು ಬಹಳ ದಿನಗಳವರೆಗೆ ಉಳಿಯಲ್ಲ. ಹೀಗಾಗಿ ನದಿಗೆ ನೀರು ಬಿಡಿ, ಬ್ಯಾರೇಜ್‌ ತುಂಬಿಸಿ ಎಂಬ ಕೂಗು ಕೇಳಿ ಬರುತ್ತದೆ. ಕಳೆದ ವಾರವಷ್ಟೇ ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡಲಾಗಿದೆ. ಇದರಿಂದ ಈ ನದಿ ಪಾತ್ರದ ಎಲ್ಲಾ ಬ್ಯಾರೇಜ್‌ಗಳು ತುಂಬಿವೆ. ಇದು ಸುತ್ತಲಿನ ಹಳ್ಳಿ, ಜನವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ.

ಮುಖ್ಯವಾಗಿ ಈ ನದಿ ಪಾತ್ರದ ಬ್ಯಾರೇಜ್‌ಗಳಲ್ಲಿನ ನೀರನ್ನೇ ಅವಲಂಬಿಸಿ, 8ರಿಂದ 10ಕ್ಕೂ ಹೆಚ್ಚು ಬಹುಹಳ್ಳಿ ಕುಡಿಯುವ ನೀರುಗಳು ನಿರ್ವಹಣೆಯಾಗುತ್ತಿದ್ದು, ಆ ಯೋಜನೆಗಳಿಗೆ ಜಲಮೂಲದ ಸಮಸ್ಯೆಯೂ ಸದ್ಯಕ್ಕಿಲ್ಲ. ಅಲ್ಲದೇ ಮಲಪ್ರಭಾ ನದಿಯ ನೀರನ್ನೇ ಬಳಸಿಕೊಂಡು ಬಾದಾಮಿ ತಾಲೂಕಿನ ಪ್ರಮುಖ ಕೆಂದೂರ ಕೆರೆ ಸಹಿತ ಹಲವು ಕೆರೆ ತುಂಬಿಸುತ್ತಿದ್ದು, ಇದೂ ಜನ- ಜಾನುವಾರುಗಳ ನೀರಿನ ದಾಹ ನೀಗಿಸುತ್ತಿದೆ.

Advertisement

ಹೆರಕಲ್‌ ಬ್ಯಾರೇಜ್‌ ತಲುಪಿದ ನೀರು: ಇತ್ತ ಘಟಪ್ರಭಾ ನದಿ ಪಾತ್ರದ ಬ್ಯಾರೇಜ್‌ಗಳೂ ಕಳೆದೊಂದು ವಾರದಿಂದ ಬತ್ತಿದ್ದವು. ಹೀಗಾಗಿ ಘಟಪ್ರಭಾ ನದಿಗೂ ಹಿಡಕಲ್‌ ಡ್ಯಾಂನಿಂದ ನೀರು ಹರಿಸಲಾಗಿದ್ದು, ಈ ನದಿ ಪಾತ್ರದ ಢವಳೇಶ್ವರ ಬ್ಯಾರೇಜ್‌ನಿಂದ ಬೀಳಗಿ ತಾಲೂಕಿನ ಹೆರಕಲ್‌ ಬ್ಯಾರೇಜ್‌ವರೆಗೂ ಹರಿದಿದ್ದು, ಎಲ್ಲ ಬ್ಯಾರೇಜ್‌ಗಳು ತುಂಬಿಕೊಂಡಿವೆ.

ಮುಖ್ಯವಾಗಿ ತಾಲೂಕಿನ ಕಾತರಕಿ-ಕಲಾದಗಿ ಹಾಗೂ ಹೆರಕಲ್‌ ಬ್ಯಾರೇಜ್‌ಗಳಲ್ಲಿ ತುಂಬಿಕೊಳ್ಳುವ ಜಲಮೂಲವನ್ನೇ ಆಶ್ರಯಿಸಿ, ಬಾಗಲಕೋಟೆ ನಗರ, ಬೀಳಗಿ ಪಟ್ಟಣ, ತಾಲೂಕು ಸಹಿತ ಸುಮಾರು ಪುನರ್‌ ವಸತಿ ಕೇಂದ್ರಗಳು, ಗ್ರಾಮಗಳು ಕುಡಿಯುವ ನೀರು ಪಡೆಯುತ್ತಿವೆ. ಹೀಗಾಗಿ ಸದ್ಯ ಎರಡೂ ಬ್ಯಾರೇಜ್‌ಗಳು ತುಂಬಿಕೊಂಡಿದ್ದರಿಂದ ಜಿಲ್ಲಾ ಕೇಂದ್ರ ಬಾಗಲಕೋಟೆ ನಗರ, ನವನಗರ, ವಿದ್ಯಾಗಿರಿ, ಸುತ್ತಲಿನ ಹತ್ತಾರು ಪುನರ್‌ವಸತಿ ಕೇಂದ್ರಗಳಿಗೆ ನಿರಂತರವಾಗಿ ಕುಡಿಯುವ ನೀರಿನ ಭೀತಿ ಸದ್ಯಕ್ಕಿಲ್ಲ.

ಜಿಲ್ಲೆಯಲ್ಲಿವೆ 638 ಜನ ವಸತಿಗಳು: ಜಿಲ್ಲೆಯ 9 ತಾಲೂಕು, 17 ನಗರ ಸ್ಥಳೀಯ ಸಂಸ್ಥೆಗಳು ಸಹಿತ ಒಟ್ಟು 638 ಜನ ವಸತಿ ಪ್ರದೇಶಗಳಿವೆ. ಹುನಗುಂದ, ಜಮಖಂಡಿ ಹಾಗೂ ಬಾದಾಮಿ, ಗುಳೇದಗುಡ್ಡ ತಾಲೂಕಿನ ಕೆಲ ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿವರ್ಷವೂ ಉಂಟಾಗುತ್ತಿತ್ತು. ಆದರೆ, ಈ ಬಾರಿ ಮಾತ್ರ ಎಲ್ಲ ಬ್ಯಾರೇಜ್‌, ಬಹುತೇಕ ಕೆರೆ, ನದಿ ಪಾತ್ರದಲ್ಲಿ ನೀರಿನ ಸಂಗ್ರಹವಿದ್ದು, ಕುಡಿವ ನೀರಿನ ಸಮಸ್ಯೆ ಜಿಲ್ಲೆಯಾದ್ಯಂತ ಕಾಣಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ 17 ನಗರ ಸ್ಥಳೀಯ ಸಂಸ್ಥೆಗಳು, 106ಕ್ಕೂ ಹೆಚ್ಚು ಪುನರ್‌ವಸತಿ ಕೇಂದ್ರಗಳು ಸೇರಿದಂತೆ ಒಟ್ಟು 638 ಜನ ವಸತಿ ಪ್ರದೇಶಗಳಿವೆ. ಮಲಪ್ರಭಾ, ಘಟಪ್ರಭಾ ನದಿಗೆ ನೀರು ಬಿಡಲಾಗಿದ್ದು, ಎಲ್ಲ ಬ್ಯಾರೇಜ್‌ ತುಂಬಿಕೊಂಡಿವೆ. ಕೃಷ್ಣಾ ನದಿ ಪಾತ್ರದಲ್ಲೂ ಸಾಕಷ್ಟು ಹಿನ್ನೀರು ಸಂಗ್ರಹಗೊಂಡಿದೆ. ಈ ವಾರದಲ್ಲಿ ತಾಲೂಕಿನ ತಿಮ್ಮಾಪುರ ಏತ ನೀರಾವರಿ ಕಾಲುವೆಗೂ ನೀರು ಬಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಇಲ್ಲ. -ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ    

 -ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next