ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಲಹೆಯನ್ನು ಭಾರತ ಖಂಡತುಂಡವಾಗಿ ತಿರಸ್ಕರಿಸಿದೆ.
ಭಾರತ, ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನು ಕೇವಲ ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಶ್ವೇತ ಭವನದಲ್ಲಿ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ತಿಳಿಸಿದ್ದರು.
ಏತನ್ಮಧ್ಯೆ ಕಾಶ್ಮೀರ ಕುರಿತ ಡೊನಾಲ್ಡ್ ಟ್ರಂಪ್ ಹೇಳಿಕೆ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ವಿಪಕ್ಷಗಳು ಕೂಡಾ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದವು.
ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಕಾಶ್ಮೀರ ಸಮಸ್ಯೆಯನ್ನು ಭಾರತವು ದ್ವಿಪಕ್ಷೀಯ ನೆಲೆಯಲ್ಲಿ ಬಗೆಹರಿಸುವಲ್ಲಿ ಇಚ್ಚಿಸುತ್ತದೆ. ತನ್ನ ನಿಲುವಿಗೆ ಭಾರತ ಎಂದಿಗೂ ಬದ್ಧವಾಗಿರಲಿದೆ ಎಂದು ತಿಳಿಸಿದ್ದರು.