ಬೆಂಗಳೂರು: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಎಲ್ಲಿಯೂ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗೆ ಅನುದಾನ ನೀಡಿರುವ ಬಗ್ಗೆ ಪ್ರಸ್ತಾಪಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತುಸು ನಿರಾಸೆ ಉಂಟುಮಾಡಿದೆ.
ರಾಜ್ಯದ ಹೊಸ ಮಾರ್ಗಗಳಿಗೆ 1,256 ಕೋಟಿ ರೂ. ಹಾಗೂ ಜೋಡಿ ಮಾರ್ಗಗಳ ನಿರ್ಮಾಣಕ್ಕೆ 1,318 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ನಗರದ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ನಿರ್ಮಿಸಲಿರುವ ಚತುಷ್ಪಥ ರೈಲ್ವೆ ಮಾರ್ಗವೂ ಸೇರಿದೆ. ಜತೆಗೆ ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ)ಗೆ ವಹಿಸಲಾದ ಎರಡು ಜೋಡಿ ಮಾರ್ಗಗಳ ಅಭಿವೃದ್ಧಿಗೆ 151 ಕೋಟಿ ರೂ. ನೀಡಲಾಗಿದೆ.
ಉಪನಗರ ಯೋಜನೆ ಕುರಿತು ಮಾತ್ರ ಎಲ್ಲಿಯೂ ಸೂಚಿಸಿಲ್ಲ. 148.17 ಕಿ.ಮೀ. ಉದ್ದದ ಉಪನಗರ ರೈಲು ಮಾರ್ಗವು ಸುಮಾರು 16,000 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗು ತ್ತಿದ್ದು, ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಕೆಎಸ್‌ಆರ್‌ನಿಂದ ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇದು ಸಂಪರ್ಕ ಕಲ್ಪಿಸಲಿದೆ. 2020ರ ನವೆಂಬರ್‌ನಲ್ಲಿ ಕೇಂದ್ರದ ಸಚಿವ ಸಂಪುಟದಿಂದ ಅನುಮೋದನೆ ದೊರಕಿತ್ತು. ಕಳೆದ ಬಾರಿ ಬಜೆಟ್‌ನಲ್ಲಿ ಯೋಜನೆಗಾಗಿ ಹತ್ತು ಕೋಟಿ ರೂ. ನೀಡಲಾಗಿತ್ತು.
ಸಂಚಾರದಟ್ಟಣೆ ನಿವಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ಉಪನಗರ ರೈಲು ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ ಶೇ. 80ರಷ್ಟು ರೈಲ್ವೆ ಇಲಾಖೆಯಿಂದ ಲಭ್ಯವಾಗಲಿದ್ದು, ಉಳಿದ ಶೇ. 20ರಷ್ಟು ಅಂದರೆ ಅಂದಾಜು 103 ಎಕರೆ ಯಷ್ಟು ಭೂಮಿಯನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಈ ಮಧ್ಯೆ ಕೆ-ರೈಡ್‌ನಿಂದ ಮಣ್ಣಿನ ಪರೀಕ್ಷೆ, ಟೆಂಡರ್ ಪ್ರಕ್ರಿಯೆ ಸೇರಿದಂತೆ ಹಲವು ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಂದರ್ಭದಲ್ಲಿ ಯೋಜನೆ ಪ್ರಗತಿಗೆ ಕನಿಷ್ಠ 100 ಕೋಟಿ ರೂ.ಗಳಾದರೂ ನೀಡಬೇಕಿತ್ತು. ಆದರೆ, ರೈಲ್ವೆ ಪಿಂಕ್ ಬುಕ್‌ನಲ್ಲಿ ಎಲ್ಲಿಯೂ ಹಣ ನೀಡಿರುವುದು ಕಂಡುಬಂದಿಲ್ಲ. ಇದು ಪ್ರಗತಿಗೆ ಹಿನ್ನಡೆ ಉಂಟಾಗಬಹುದು ಎಂದು ನಗರ ರೈಲು ತಜ್ಞ ಸಂಜೀವ್ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸಿದರು.
“ಉಪನಗರ ರೈಲು ಯೋಜನೆಗೆ ಈ ವರ್ಷ ಅನುದಾನದ ಅವಶ್ಯಕತೆ ಇಲ್ಲ. ಈಗಾಗಲೇ ಹಣ ಲಭ್ಯವಿದೆ. ಇನ್ನು ರಾಜ್ಯ ಸರ್ಕಾರದಿಂದಲೂ ನೀಡಲಾಗುತ್ತಿದೆ. ಹಾಗಾಗಿ, ಸಮಸ್ಯೆ ಆಗದು’ ಎಂದು ಸಂಸದ ಪಿ.ಸಿ. ಮೋಹನ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಅಂದ ಹಾಗೆ ಉದ್ದೇಶಿತ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಲಾ ಶೇ. 20ರಷ್ಟು ಅನುದಾನ ಒದಗಿಸಲಿದ್ದು, ಉಳಿದ ಶೇ. 60ರಷ್ಟು ಮೊತ್ತವನ್ನು ಸಾಲಗಳಿಂದ ಹೊಂದಿಸಿಕೊಳ್ಳುವ ಹೊಣೆ ಕೆ-ರೈಡ್ ಮೇಲಿದೆ.