ಕನ್ನಡದಲ್ಲಿ ತಾಯಿ-ಮಗಳ ಸಂಬಂಧ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ “ಡಾಟರ್ ಆಫ್ ಪಾರ್ವತಮ್ಮ’ ಹೊಸ ಸೇರ್ಪಡೆ. ಹಾಗಂತ, ಇದು ರೆಗ್ಯುಲರ್ ಪ್ಯಾಟ್ರನ್ ಸಿನಿಮಾವಲ್ಲ. ನಾಯಕಿ ಪ್ರಧಾನವಾಗಿರುವ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಹೈಲೈಟ್. ಚಿತ್ರ ಮೇ.24 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದೆ. ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ನಟ “ಡಾಲಿ’ ಧನಂಜಯ್,”ಒಳ್ಳೆಯ ತಂಡವಿದ್ದರೆ, ಒಳ್ಳೆಯ ಚಿತ್ರ ಆಗುವುದರಲ್ಲಿ ಸಂಶಯವಿಲ್ಲ. ಟ್ರೇಲರ್ ನೋಡಿದಾಗ, ಒಳ್ಳೆಯ ಥ್ರಿಲ್ಲರ್ ನಿರೀಕ್ಷಿಸಬಹುದು. ನಾನು ಸಾಹಿತಿ ಅಲ್ಲ. ಕೆಲವೊಮ್ಮೆ ಖುಷಿಯಾದಾಗ, ಗೊಂದಲ ಇದ್ದಾಗ, ತನ್ನೊಳಗಿನ ಭಾವನೆಗಳನ್ನು ಪೇಪರ್ ಮೇಲೆ ಅಕ್ಷರ ರೂಪದಲ್ಲಿ ತೋರಿಸಿಕೊಳ್ಳುತ್ತಿದ್ದೆ. ಗೆಳೆಯರು ಹಾಡು ಬರೆದುಕೊಡು ಅಂದಾಗ, ಭಯವಾಯ್ತ. ಆದರೂ, ಟ್ಯೂನ್ ಚೆನ್ನಾಗಿದ್ದರಿಂದ ಹಾಡು ಬರೆದುಕೊಟ್ಟೆ. ಹರಿಪ್ರಿಯಾ ಅವರ 25 ನೇ ಚಿತ್ರವಿದು. ಅವರು ರೊಚ್ಚಿಗೆದ್ದು, ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೇ.23 ಕ್ಕೆ ಸುಮಮ್ಮ ಮಿಂಚಲಿ, ಮೇ.24 ರಂದು “ಪಾರ್ವತಮ್ಮ’ ಮಾತಾಡಲಿ’ ಅಂದರು ಧನಂಜಯ್.
ಹರಿಪ್ರಿಯಾ ಅವರಿಗೆ ಇದು 25 ನೇ ಚಿತ್ರ. ಸಹಜವಾಗಿಯೇ ಅವರಿಗೆ ಖುಷಿ. “ನಾಯಕಿ ಮೇಲೆ ನಂಬಿಕೆ ಇಟ್ಟು, ಈ ರೀತಿಯ ಸಿನಿಮಾ ಮಾಡುವ ನಿರ್ಮಾಪಕರು ಕಮ್ಮಿ. ಇಲ್ಲಿ ನಂಬಿಕೆ ಇಟ್ಟು ಚಿತ್ರ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯೇ ಅರ್ಧ ಗೆಲುವು ಕೊಟ್ಟಿದೆ. ಇನ್ನರ್ಧ ಜನರು ನೋಡಿ ಗೆಲ್ಲಿಸಬೇಕು. ಇದು ಅಮ್ಮ-ಮಗಳ ಕುರಿತಾದ ಕಥೆ ಹೊಂದಿದ್ದರೂ, ಸಾಕಷ್ಟು ಥ್ರಿಲ್ಲಿಂಗ್ ಅಂಶಗಳಿವೆ. ಸುಮಲತಾ ಅಮ್ಮನ ಜೊತೆ ನಟಿಸಿದ್ದು ಮರೆಯದ ಅನುಭವ. ನಾನಿಲ್ಲಿ ವೈದೇಹಿ ಎಂಬ ತನಿಖಾಧಿಕಾರಿ ಪಾತ್ರ ಮಾಡಿದ್ದೇನೆ. ಫೈಟ್ಸ್ ಕೂಡ ಇದೆ. ಹಾಗಂತ, ಬಿಲ್ಡಪ್ಸ್ ಇಲ್ಲ. ಎಲ್ಲವೂ ನ್ಯಾಚ್ಯುರಲ ಆಗಿದೆ’ ಅಂದರು ಹರಿಪ್ರಿಯಾ.
ನಿರ್ಮಾಪಕ ಶಶಿಧರ್ ಕೆ.ಎಂ. ಅವರಿಗೆ ಇದು ಮೊದಲ ಚಿತ್ರ. ಹಲವು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಅವರಿಗೆ ಸಾಕಷ್ಟು ಅನುಭವ ಇದೆ. ಆ ಕಾರಣದಿಂದ “ಡಾಟರ್ ಆಫ್ ಪಾರ್ವತಮ್ಮ’ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರ ಮಾಡಿದ್ದು ಅವರಿಗೆ ಹೆಮ್ಮೆಯ ವಿಷಯವಂತೆ. ಆ ಬಗ್ಗೆ ಹೇಳುವ ಅವರು, “ಸುಮಲತಾ ಅವರು ಕಥೆ ಒಪ್ಪಿದ್ದು ಮೊದಲ ಗೆಲುವು, ಶೀರ್ಷಿಕೆ ಇಟ್ಟಾಗ ಸಿಕ್ಕ ಮೆಚ್ಚುಗೆಯೇ ಚಿತ್ರತಂಡದ ಹುಮ್ಮಸ್ಸನ್ನು ಹೆಚ್ಚಿಸಿತ್ತು. ಅಂಬರೀಶ್ ಅಣ್ಣ ಅವರ ಜೊತೆ ಒಮ್ಮೆ ಮಾತನಾಡಿದಾಗ, ಚೆನ್ನಾಗಿ ಸಿನಿಮಾ ಮಾಡಿ, ನನ್ನ ಆಶೀರ್ವಾದ ಸದಾ ಇರುತ್ತೆ ಅಂದಿದ್ದರು. ಅವರ ಆಶೀರ್ವಾದದಿಂದ ಚಿತ್ರಕ್ಕೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ನಾವು ಎಷ್ಟೇ ಪ್ರೀತಿಯಿಂದ ಕಷ್ಟ ಪಟ್ಟು ಸಿನಿಮಾ ಮಾಡಿದರೂ, ಅದು ಎಲ್ಲರನ್ನೂ ತಲುಪಲು ಮಾಧ್ಯಮ, ಪತ್ರಕರ್ತರು ಕಾರಣ. ನಿಮ್ಮ ಸಹಕಾರ ಬೇಕು’ ಅಂದರು ಶಶಿಧರ್.
ಸಂಗೀತ ನಿರ್ದೇಶಕ ಮಿದುನ್ ಮುಕುಂದನ್, “ಒಂದು ಮೊಟ್ಟೆಯ ಕಥೆ’ ಬಳಿಕ ಖುಷಿಯಿಂದ ಮಾಡಿದ ಚಿತ್ರವಿದು. ಸಾಕಷ್ಟು ಪ್ರಯೋಗ ಇಲ್ಲಿ ಮಾಡಲಾಗಿದೆ. ಎರಡು ಹಾಡು ಚೆನ್ನಾಗಿ ಮೂಡಿಬಂದಿವೆ. ನಿರ್ದೇಶಕ, ನಿರ್ಮಾಪಕರು ಕೊಟ್ಟ ಫ್ರೀಡಮ್‌ನಿಂದಾಗಿ, ಕೆಲಸ ಚೆನ್ನಾಗಿ ಮಾಡಲು ಸಾಧ್ಯವಾಗಿದೆ’ ಅಂದರು ಅವರು.
ನಿರ್ದೇಶಕ ಶಂಕರ್, “ಥ್ರಿಲ್ಲರ್ ಜೊತೆ ಅಮ್ಮ, ಮಗಳ ಸಂಬಂಧ ಚಿತ್ರದ ಹೈಲೈಟ್. ನಾಯಕಿ ಪ್ರಧಾನ ಚಿತ್ರ ಇದಾಗಿದ್ದರೂ, ಪಕ್ಕಾ ಕಮರ್ಷಿಯಲ್ ಚಿತ್ರವಾಗಿ ಮೂಡಿಬಂದಿದೆ. ಬೆಂಗಳೂರಲ್ಲೇ ಚಿತ್ರೀಕರಣ ನಡೆದಿದೆ. ನನ್ನ ಕಥೆ ಒಪ್ಪಿ ಮಾಡಿದ ಸುಮಮ್ಮ, ಹರಿಪ್ರಿಯಾ ಹಾಗೂ ಅವಕಾಶ ಕೊಟ್ಟ ನಿರ್ಮಾಪಕರು, ಹಾಡು ಬರೆದುಕೊಟ್ಟ ಧನಂಜಯ್ ಮತ್ತು ಚಿತ್ರ ಚೆನ್ನಾಗಿ ಮೂಡಿಬರಲು ಹಗಲಿರುಳು ಶ್ರಮಿಸಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ಶಂಕರ್. ಅಂದು ಸೂರಜ್‌ಗೌಡ, ಪ್ರಭು, “ತರಂಗ’ ವಿಶ್ವ ಸಿನಿಮಾ ಕುರಿತು ಮಾತನಾಡಿದರು. ನಿರ್ಮಾಪಕರಾದ ಕೃಷ್ಣ, ಮಧು, ಸಂದೀಪ್ ಇತರರು ಇದ್ದರು.