Advertisement

ಶೀಘ್ರವೇ ಶಾಲಾರಂಭ ಇಲ್ಲ, ಮಕ್ಕಳ ಆರೋಗ್ಯವೇ ಮುಖ್ಯ: ಸುರೇಶ್ ಕುಮಾರ್

06:07 PM Oct 09, 2020 | Mithun PG |

ಬೆಂಗಳೂರು:  ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ. ನಮಗೆ ನಮ್ಮ‌ ಮಕ್ಕಳ  ಆರೋಗ್ಯ,  ಸುರಕ್ಷತೆ ಅತ್ಯಂತ ಮುಖ್ಯ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Advertisement

ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಟೆಗಾಗಿ ಮಾಡುವುದಿಲ್ಲ. ಶಾಲೆಗಳ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಹಿಡಿದು, ಅನೇಕ ಸಚಿವರು, ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅದೇ ರೀತಿ ಆರೋಗ್ಯ ಸಚಿವರಾದ ಶ್ರೀರಾಮುಲುರವರೂ ಸಹ  ಈ ಕುರಿತು ಚರ್ಚೆ ನಡೆಸಿ ನನಗೆ ತಮ್ಮ ಅಭಿಪ್ರಾಯ ನೀಡುವುದಾಗಿ ತಿಳಿಸಿದ್ದಾರೆ. ಡಾ. ಸುಧಾಕರ್ ರವರೂ ನನಗೆ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ ಎಂದರು.

ಆದರೆ ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂಬರ್ಥದಲ್ಲಿ ವಿಪುಲವಾಗಿ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತ್ತೆ ಮತ್ತೆ ಇದು ಮರುಕಳಿಸುತ್ತಲೇ ಇದೆ. ನಾನು ಬಾರಿ  ಬಾರಿ ಸ್ಪಷ್ಟೀಕರಣ ಕೊಡುತ್ತಲೇ ಇದ್ದೇನೆ. ಈಗಾಗಲೇ ರಾಜ್ಯದ  ಸನ್ಮಾನ್ಯ ಮುಖ್ಯಮಂತ್ರಿಗಳು ಸಹ  ಈ ಕುರಿತು ಸರ್ಕಾರದ  ನಿಲುವನ್ನು ಬಹಳ ಸ್ಪಷ್ಟವಾಗಿ  ತಿಳಿಸಿದ್ದಾರೆ.

ಇದನ್ನೂ ಓದಿ:  ಸುಭದ್ರವಾಗಿದೆ ಟೀಂ ಇಂಡಿಯಾ ಭವಿಷ್ಯ… ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರರು

ನಾನು ಮತ್ತೊಮ್ಮೆ, ಮಗದೊಮ್ಮೆ ಸ್ಪಷ್ಟಗೊಳಿಸುತ್ತಿದ್ದೇನೆ.‌ ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ. ಎಲ್ಲ ಮಾಧ್ಯಮಗಳಲ್ಲಿ ನನ್ನದೊಂದು ಮನವಿ.  ಶಿಕ್ಷಣ ಇಲಾಖೆಯ ಮುಂದಿನ ತೀರ್ಮಾನವನ್ನು  ಮಕ್ಕಳ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ಎಲ್ಲರೊಡನೆ ಸಮಾಲೋಚನೆಯ ನಂತರ ಕೈಗೊಳ್ಳಲಾಗುತ್ತದೆಯೇ  ಹೊರತು ಯಾವುದನ್ನೂ ಧಿಡೀರನೆ ಘೋಷಿಸುವುದಿಲ್ಲ.

Advertisement

ಯಾವುದೇ ಪೋಷಕರ ಮನಸ್ಸಿನಲ್ಲಿ ಈ ಕುರಿತು ಕಿಂಚಿತ್  ಸಹ ಗೊಂದಲ ಬೇಡ ಎಂದು ಕಳಕಳಿಯಿಂದ ತಿಳಿಸುತ್ತಿದ್ದೇನೆ. ನಾನು ಈ ರಾಜ್ಯದ ಶಿಕ್ಷಣ ಸಚಿವ ಮಾತ್ರನಲ್ಲ. ಸುಮಾರು ಒಂದು ಕೋಟಿ ಮಕ್ಕಳ ಪೋಷಕ  ಎಂಬುದರ ಅರಿವು ನನಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !

Advertisement

Udayavani is now on Telegram. Click here to join our channel and stay updated with the latest news.

Next