ಉಡುಪಿ: ಸೋಮವಾರ ಜಿಲ್ಲಾಸ್ಪತ್ರೆಯ ಎಲ್ಲ 10 ಐಸಿಯು ಬೆಡ್‌ಗಳು ಭರ್ತಿಯಾಗಿದ್ದು ರೋಗಿಗಳು ಪರದಾಡಿದ ಘಟನೆ ನಡೆದಿದೆ. ಕುಂದಾಪುರದ ತಾಲೂಕು ಆಸ್ಪತ್ರೆಯಲ್ಲಿ 10 ಐಸಿಯು ಬೆಡ್‌ಗಳಿದ್ದು ಭರ್ತಿ ಯಾಗಿವೆ. ಈ ಮಧ್ಯೆ ಬಳ್ಳಾರಿಯಿಂದ 10 ಮೆಟ್ರಿಕ್ ಟನ್ ಆಕ್ಸಿಜನ್ ಬರುತ್ತಿದ್ದು, ಸದ್ಯಕ್ಕೆ ತೊಂದರೆಯಿಲ್ಲ ಎನ್ನುತ್ತದೆ ಜಿಲ್ಲಾಡಳಿತ.
ಸಹಾಯಕ್ಕಿಲ್ಲದ ಸಹಾಯವಾಣಿ : ಜಿಲ್ಲಾಸ್ಪತ್ರೆಯ ಸಹಾಯವಾಣಿಗೆ ಕರೆ ನೀಡಿದರೆ ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳಿವೆ. ಸೋಮವಾರ ಬೆಳಗ್ಗೆ 11ರಿಂದ ಚಿಕಿತ್ಸೆಗಾಗಿ ಪರದಾಡಿದ ಮಹಿಳೆಗೆ ಸಂಜೆ 5.40ರ ಸುಮಾರಿಗೆ ಬೆಡ್ ವ್ಯವಸ್ಥೆಯಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಇದೆ ಎನ್ನುವ ಗಂಗೊಳ್ಳಿಯ ಪುರುಷನಿಗೆ ವೆಂಟಿಲೇಟರ್ ಆ್ಯಂಬುಲೆನ್ಸ್ ಸಿಗದೆ ಆಸ್ಪತ್ರೆಗೆ ಸಾಗಿಸಲು ಕುಟುಂಬದ ಸತತ ಪ್ರಯತ್ನವೂ ವಿಫಲವಾಗಿದೆ ಎನ್ನಲಾಗಿದೆ.
6 ಟನ್ ಆಕ್ಸಿಜನ್ ಅಗತ್ಯ : ಉಡುಪಿ ಜಿಲ್ಲೆಗೆ ದಿನಕ್ಕೆ 6 ಟನ್ ಆಕ್ಸಿಜನ್ ಬೇಕು. ಬೆಳಪುವಿನಲ್ಲಿ ನೂತನವಾಗಿ ಆಕ್ಸಿಜನ್ ರೀಫಿಲ್ಲಿಂಗ್ ಘಟಕ ಆರಂಭಿಸಲಾಗಿದೆ. ಇಲ್ಲಿಗೆ ಬಳ್ಳಾರಿ ಮತ್ತು ಬೆಂಗಳೂರಿನಿಂದ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಮಣಿಪಾಲ ಆಸ್ಪತ್ರೆಯಲ್ಲಿ 20 ಕೆಎಲ್, ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್ ಆಮ್ಲಜನಕ ದಾಸ್ತಾನು ವ್ಯವಸ್ಥೆ ಇದೆ. ಇಲ್ಲಿಗೆ ಬಳ್ಳಾರಿಯಿಂದ ಪೂರೈಕೆಯಾಗುತ್ತಿದೆ. ಉಳಿದ ಕಡೆ ಬೆಳಪು ಮತ್ತು ಮಂಗಳೂರಿನಿಂದ ಪೂರೈಕೆಯಾಗುತ್ತಿದೆ. ಬೆಳಪುವಿಗೆ ಪ್ರತ್ಯೇಕ ಅಲಾಟ್‌ಮೆಂಟ್ ಇನ್ನೂ ಆಗಿಲ್ಲ, ಬಳ್ಳಾರಿಯಿಂದ ದ್ರವೀಕೃತ ಆಮ್ಲಜನಕವನ್ನು ಟ್ಯಾಂಕರ್ ಮೂಲಕ ಪೂರೈಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದು ಇನ್ನಷ್ಟೇ ಅನುಷ್ಠಾನವಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇದೆ. ಬೆಡ್‌ಗಳ ಸಂಖ್ಯೆಯನ್ನು ಜಾಸ್ತಿ ಮಾಡಿದರೆ ಆಕ್ಸಿಜನ್ ಕೊರತೆ ಉಂಟಾಗಲಿದೆ. 10 ಮೆಟ್ರಿಕ್ ಟನ್ ಆಕ್ಸಿಜನ್ ಬಳ್ಳಾರಿಯಿಂದ ಹೊರಟಿದ್ದು, ಮಂಗಳವಾರ ತಲುಪಲಿದೆ. ಸದ್ಯಕ್ಕೆ ಸಮಸ್ಯೆ ಎದುರಾಗದು. ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಬೆಡ್ ಹೆಚ್ಚಳಕ್ಕೆ ಸಚಿವರು ಸೂಚನೆ ನೀಡಿದ್ದು ಅದರ ಬಗೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೇ 4ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಹೆಚ್ಚಳಕ್ಕೆ ತಿಳಿಸಿದ್ದು ಅವರು ಒಪ್ಪಿದ್ದಾರೆ. ಕಾಲ್ ಸೆಂಟರ್ ಸಮಸ್ಯೆ ಕುರಿತೂ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಚರ್ಚಿಸಿ ಸೂಕ್ತ ಕ್ರಮಕ್ಕೆ ತಿಳಿಸುತ್ತೇನೆ. – ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ