Advertisement

ನೋ ಶಾಕ್‌: ವಿದ್ಯುತ್‌ಗೆ ಸೌರ, ಪವನ, ವರುಣ ಕೃಪೆ

06:00 AM Jul 11, 2018 | |

ಬೆಂಗಳೂರು: ಸಮ್ಮಿಶ್ರ ಸರಕಾರಕ್ಕೆ ಮುಂಬರುವ ದಿನಗಳಲ್ಲಿ ವಿದ್ಯುತ್‌ ಶಾಕ್‌ ಹೊಡೆಯುವ ಆತಂಕ ಸದ್ಯಕ್ಕಿಲ್ಲ! ವರುಣನ ಕೃಪೆಯಿಂದಾಗಿ ಜಲ ವಿದ್ಯುತ್‌ ಘಟಕಗಳಿರುವ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9ರಿಂದ 18ರಷ್ಟು ನೀರಿನ ಸಂಗ್ರಹ ಹೆಚ್ಚಾಗಿದೆ. ಜತೆಗೆ ಸೌರ, ಪವನ ಶಕ್ತಿಯೂ ಕೃಪೆ ತೋರಿದ್ದು, ರಾಜ್ಯದ ಒಟ್ಟು ಬಳಕೆಯಲ್ಲಿ ಶೇ.60ರಷ್ಟು ವಿದ್ಯುತ್‌ ನವೀಕರಿಸಬಹುದಾದ ಇಂಧನ ಮೂಲ ಗಳಿಂದಲೇ ಪೂರೈಕೆಯಾಗುತ್ತಿದೆ.

Advertisement

ಕಳೆದ ಮೇ, ಜೂ. 9ರಂದು ಜಲ ವಿದ್ಯುತ್‌ಘಟಕಗಳಿರುವ ಜಲಾಶಯಗಳ ನೀರಿನ ಮಟ್ಟ ಸರಿಸುಮಾರು ಹಿಂದಿನ ವರ್ಷದಷ್ಟೇ (2017) ಇತ್ತು. ಹಾಗಾಗಿ ಜಲವಿದ್ಯುತ್‌ ಉತ್ಪಾ ದನೆ ಬಗ್ಗೆ ಆತಂಕ ಮೂಡಿತ್ತು. ಆದರೆ ಈ ಬಾರಿಯ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ಲಿಂಗನಮಕ್ಕಿ ಜಲಾಶಯ ದಲ್ಲಿ ಶೇ.18ರಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಸೂಪಾದಲ್ಲಿ ಶೇ. 9, ಮಾಣಿ ಜಲಾಶಯದಲ್ಲಿ ಶೇ.13ರಷ್ಟು ನೀರಿನ ಸಂಗ್ರಹ ಹೆಚ್ಚಾಗಿರುವುದು ಇಂಧನ ಇಲಾಖೆಗೆ ಸಮಾಧಾನ ತಂದಿದೆ. ಪವನ ಶಕ್ತಿ, ಸೌರಶಕ್ತಿ ಉತ್ಪಾದನೆಯೂ ವೃದ್ಧಿಸಿರುವ ಹಿನ್ನೆಲೆಯಲ್ಲಿ ಉಷ್ಣ ವಿದ್ಯುತ್‌ ಉತ್ಪಾದನೆ ಮೇಲೆ ಒತ್ತಡ ತಗ್ಗಿದ್ದು, ಕಲ್ಲಿದ್ದಲು ಶೇಖರಣೆಗೆ ಇಂಧನ ಇಲಾಖೆ ಗಮನಹರಿಸಿದೆ. 

400 ಮೆಗಾವ್ಯಾಟ್‌ ಉತ್ಪಾದನೆ: ಜಲವಿದ್ಯುತ್‌ ಮೂಲದಿಂದ ಗರಿಷ್ಠ 3,657 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಸದ್ಯ 350ರಿಂದ 400 ಮೆಗಾವ್ಯಾಟ್‌ ಜಲ ವಿದ್ಯುತ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಪ್ರಮುಖ ಜಲಾಶಯಗಳಿಂದ ವಿದ್ಯುತ್‌ ಉತ್ಪಾದನೆ ಗಿಂತಲೂ ಸಮತೋಲನ ಜಲಾಶಯದ ಬಳಿಯ ಘಟಕಗಳಿಂದಷ್ಟೇ ವಿದ್ಯುತ್‌ ಉತ್ಪಾದಿಸುತ್ತಿದೆ.

ನೈಸರ್ಗಿಕ ಶಕ್ತಿ ಗರಿಷ್ಠ ಉತ್ಪಾದನೆ: ಒಂದೆಡೆ ಧಾರಾಕಾರ ಮಳೆಯಾಗುತ್ತಿದ್ದಂತೆ ಇನ್ನೊಂದೆಡೆ ಸೌರಶಕ್ತಿ, ಪವನ ಶಕ್ತಿ ಮೂಲದಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿದೆ. ಸೌರಶಕ್ತಿ ಮಳೆಗಾಲದಲ್ಲೂ ಸಾಕಷ್ಟು ಲಭ್ಯವಾಗಿದ್ದು, ಜು.10ರ ಮಧ್ಯಾಹ್ನ 1ರ ಹೊತ್ತಿಗೆ 1,700 ಮೆಗಾವ್ಯಾಟ್‌ನಷ್ಟು ಉತ್ಪಾದನೆಯಾಗಿತ್ತು. ಇದೇ ಹೊತ್ತಿಗೆ ಪವನಶಕ್ತಿ ಮೂಲದಿಂದಲೂ 2,700 ಮೆಗಾವ್ಯಾಟ್‌ ಹಾಗೂ ಇತರೆ ಮೂಲಗಳಿಂದ 300 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗಿತ್ತು.

ಶೇ.60ರಷ್ಟು ವಿದ್ಯುತ್‌: ರಾಜ್ಯದ ಆಂತರಿಕ ಉತ್ಪಾದನೆ ಹಾಗೂ ಕೇಂದ್ರ ಸರಕಾರದೊಂದಿಗೆ ಹಂಚಿಕೆ ಆಧಾರದಲ್ಲಿ ಪೂರೈಕೆಯಾಗುತ್ತಿರುವ ವಿದ್ಯುತ್‌ ಶೇ.40ರಷ್ಟಿದ್ದರೆ, ನೈ ಸರ್ಗಿಕ ಮೂಲಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್‌ ಪ್ರಮಾಣ ಶೇ.60ರಷ್ಟಿದೆ. ಇದರಿಂದಾಗಿ ಪವನ ಶಕ್ತಿಯಿಂದ ನಿರಂತರ ವಿದ್ಯುತ್‌ ಬಳಕೆ ಜತೆಗೆ ಹಗಲು ಹೊತ್ತಿನಲ್ಲಿ ಸೌರವಿದ್ಯುತ್‌ ಬಳಕೆಗೆ ಆದ್ಯತೆ ನೀಡಿ, ರಾತ್ರಿ ವೇಳೆ ಬೇಡಿಕೆಗೆ ಅನುಗುಣವಾಗಿ ಜಲ, ಉಷ್ಣ ವಿದ್ಯುತ್‌ ಉತ್ಪಾದನೆಗೆ ಇಲಾಖೆ ಆದ್ಯತೆ ನೀಡಿದೆ. ಸೆಪ್ಟಂಬರ್‌ವರೆಗೆ ಪವನಶಕ್ತಿ ಯಿಂದ ಉತ್ತಮ ವಿದ್ಯುತ್‌ ಉತ್ಪಾದನೆ ನಿರೀಕ್ಷೆ ಇದೆ.

Advertisement

ಉಷ್ಣ ಘಟಕಗಳು ಸ್ಥಗಿತ: ರಾಯಚೂರಿನ ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಮೂರು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, ಐದು ಘಟಕ ಸ್ಥಗಿತವಾಗಿವೆ. ಯರಮರಸ್‌ನ ವೈಟಿಪಿಎಸ್‌ ಘಟಕದಲ್ಲಿ ಒಂದು ಕಾರ್ಯ ನಿರ್ವಹಿಸುತ್ತಿದ್ದು, ಮತ್ತೂಂದು ಸ್ಥಗಿತವಾಗಿದೆ. ಬಿಟಿಪಿಎಸ್‌ನ ಮೂರು ಘಟಕಗಳು ಸ್ಥಗಿತಗೊಂಡಿವೆ. 

ಕಲ್ಲಿದ್ದಲು ಶೇಖರಣೆಗೆ ಒತ್ತು: ಜಲವಿದ್ಯುತ್‌, ನೈಸರ್ಗಿಕ ಶಕ್ತಿ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಷ್ಣ ವಿದ್ಯುತ್‌ ಪ್ರಮಾಣ ತಗ್ಗಿದೆ. ಹಾಗಾಗಿ ಕಲ್ಲಿದ್ದಲು ಶೇಖರಣೆಗೆ ಕರ್ನಾಟಕ ವಿದ್ಯುತ್‌ ನಿಗಮ ಒತ್ತು ನೀಡಿದ್ದು, ಈವರೆಗೆ ಮೂರು ಸ್ಥಾವರಗಳಿಂದ 4.25 ಲಕ್ಷ ಟನ್‌ ಕಲ್ಲಿದ್ದಲು ಶೇಖರಿಸಿದೆ.

ಸೌರ, ಪವನಶಕ್ತಿ ಮೂಲದ ಜತೆಗೆ ಉತ್ತಮ ಮಳೆಯಿಂದಾಗಿ ನೈಸರ್ಗಿಕ ಶಕ್ತಿ ಮೂಲದ ವಿದ್ಯುತ್‌ ಪ್ರಮಾಣ ಹೆಚ್ಚಾಗಿರುವುದು ಆಶಾದಾಯಕ. ಇದರಿಂದ ನಿಗಮದ ವಹಿವಾಟಿನ ಮೇಲೆ ಅಡ್ಡ ಪರಿಣಾಮ ಬೀರಿದರೂ ಒಟ್ಟಾರೆ ವಿದ್ಯುತ್‌ ಉತ್ಪಾದನೆ ದೃಷ್ಟಿಯಿಂದ ಉಪಯುಕ್ತ. ಪರಿಸ್ಥಿತಿಗೆ ತಕ್ಕಂತೆ ಜಲ, ಉಷ್ಣ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.
ಜಿ. ಕುಮಾರ ನಾಯಕ್‌, ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ


Advertisement

Udayavani is now on Telegram. Click here to join our channel and stay updated with the latest news.

Next