ಬೈಲಹೊಂಗಲ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿನ ಕೋವಿಡ್ ಸೋಂಕಿತ ಹೆಚ್ಚಿನ ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ ತಾಲೂಕು ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳು ಪರಿಶ್ರಮಪಟ್ಟಿದ್ದರ ಫಲವಾಗಿ ಬೈಲಹೊಂಗಲ ಮತ್ತು ಸುತ್ತಮುತ್ತಲಿನ ಗ್ರಾಮಗಳು ಕೋವಿಡ್ ದಿಂದ ಮುಕ್ತವಾಗಿವೆ. ಸದ್ಯ ರೋಗಿಗಳನ್ನು ಸ್ಥಳಾಂತರಿಸಿದರೆ ಅವರ ಪರಿಶ್ರಮ ವ್ಯರ್ಥವಾಗುತ್ತದೆ ಎಂದರು.
ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿನ ಕೋವಿಡ್ ಸೋಂಕಿತ ಹೆಚ್ಚಿನ ರೋಗಿಗಳನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲು ಕೋವಿಡ್ ವಾರ್ಡ್ ಸಿದ್ಧತೆ ಭರದಿಂದ ನಡೆದಿದೆ. ಈ ಆಸ್ಪತ್ರೆಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನಿರ್ಗತಿಕರು, ರೈತರು, ಬಡರೋಗಿಗಳು ಸಾವಿರಾರು ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದು, ಈ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡುವುದು ಸರಿಯಲ್ಲ. ಸೋಂಕಿತರ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿಯೇ ಮುಂದುವರಿಸಬೇಕು. ಕೂಡಲೇ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಾದ ಸೋಂಕಿತರನ್ನು ಸ್ಥಳಾಂತರಿಸುವ ವ್ಯವಸ್ಥೆ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಹಾಂತೇಶ ಕಮತ, ಎಮ್.ಎಸ್. ಪಟ್ಟಣಶೆಟ್ಟಿ, ದುಂಡಪ್ಪ ಪಣದಿ, ಮಲ್ಲಿಕಾರ್ಜುನ ಕರಡಿಗುದ್ದಿ ಮತ್ತಿತರರು ಇದ್ದರು.