Advertisement

ಮದರಸಾಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಚಿಂತನೆ ಸದ್ಯಕ್ಕಿಲ್ಲ: ಸಚಿವ ಬಿ.ಸಿ.ನಾಗೇಶ್‌

09:39 PM Jul 19, 2022 | Team Udayavani |

ಬೆಂಗಳೂರು: ರಾಜ್ಯದ ಮದರಸಾಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಪರಿಚಯಿಸುವ ಚಿಂತನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಸಾಮಾನ್ಯ ಶಾಲೆಗಳಲ್ಲಿ ಕಲಿಸುವಂತಹ ಗಣಿತ, ವಿಜ್ಞಾನ, ಇಂಗ್ಲಿಷ್‌ ಮತ್ತಿತರ ವಿಷಯಗಳ ಕಲಿಕೆಗೆ ಆಸಕ್ತರಾಗಿದ್ದಾರೆ. ಆ ಮಕ್ಕಳ ಪೋಷಕರು ಕೂಡ ಈ ನಿಟ್ಟಿನಲ್ಲಿ ಒತ್ತಾಸೆ ಹೊಂದಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಕ್ಕಳನ್ನು ಸಾಮಾನ್ಯ ಶಾಲೆಗಳಿಗೆ ಕಳುಹಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಪರ್ಯಾಯವಾಗಿ ಉರ್ದು ಶಾಲೆಗಳಲ್ಲಿ ಹಾಜರಾತಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದರು.

ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಪ್ರತ್ಯೇಕ ಪಠ್ಯಕ್ರಮ ಪರಿಚಯಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಸದ್ಯಕ್ಕೆ ನಮ್ಮಲ್ಲಿ ಆ ರೀತಿಯ ಚಿಂತನೆ ಅಥವಾ ಪ್ರಸ್ತಾವನೆ ಇಲ್ಲ. ಆದರೆ, ಮದರಸಾಗಳಿಗೆ ತೆರಳುವ ಮಕ್ಕಳು ಸಾಮಾನ್ಯ ಶಾಲೆಗಳಿಗೆ ತೆರಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ಆಗಸ್ಟ್‌ 9ರಿಂದ 17ರವರೆಗೆ ಪ್ರತಿ ಶಾಲೆ ಮತ್ತು ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ಮದರಸಾಗಳಿಗೂ ಅನ್ವಯ ಆಗುವಂತೆ ಹೊರಡಿಸಿರುವ ಆದೇಶಕ್ಕೆ ಪ್ರತಿಕ್ರಿಯಿಸಿ, “ಮದರಸಾಗಳೂ ದೇಶದಲ್ಲೇ ಇವೆ. ಈ ರಾಷ್ಟ್ರದ ಧ್ವಜವನ್ನು ಉಳಿದ ಶಾಲೆಗಳಂತೆಯೇ ಮದರಸಾಗಳ ಮೇಲೂ ರಾರಾಜಿಸಬೇಕು. ಆ ಸಮುದಾಯದ ಮುಖಂಡರೂ ಕೂಡ ಈ ಆಶಯ ವ್ಯಕ್ತಪಡಿಸಿದ್ದಾರೆ’ ಎಂದರು.

ಸಿಎಂ ಆಸೆ ತಪ್ಪಲ್ಲ: “ಸಂವಿಧಾನವು ಎಲ್ಲರಿಗೂ ಮುಖ್ಯಮಂತ್ರಿಗಳಾಗುವ ಅವಕಾಶ ನೀಡಿದೆ. ಯಾರ್ಯಾರಿಗೆ ಆಸೆ ಇದೆಯೋ ಅವರೆಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಐದರಿಂದ ಆರು ಬಾರಿ ಶಾಸಕರಾಗಿದ್ದಾರೆ. ಹಾಗಾಗಿ, ತಾವು ಮುಖ್ಯಮಂತ್ರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next