Advertisement
ಮಹಾನಗರ: ಎಟಿಎಂ ಅಂದರೆ ಅಲ್ಲಿ ಬಿಗಿ ಭದ್ರತೆ ಇರಬೇಕು. ಸುರಕ್ಷತೆಯ ದೃಷ್ಟಿಯಿಂದ ದಿನದ 24 ಗಂಟೆಯೂ ಭದ್ರತಾ ಸಿಬಂದಿ ನಿಯೋಜನೆ ಮಾಡಿರಬೇಕು. ಆದರೆ ನಗರದ ಹೆಚ್ಚಿನ ಎಟಿಎಂಗಳಲ್ಲಿ ಭದ್ರತಾ ಸಿಬಂದಿಗಳೇ ಇಲ್ಲ. ಇತ್ತೀಚೆಗೆಯಷ್ಟೇ ನಗರದ ಮೂರು ಎಟಿಎಂ ಮೆಶಿನ್‌ಗೆ ರಹಸ್ಯವಾಗಿ ಚಿಪ್ ಹಾಗೂ ಕೆಮರಾ ಅಳವಡಿಸಿ ಗ್ರಾಹಕರ ಮಾಹಿತಿ ಕದ್ದು ಬೇರೆಡೆ ಕುಳಿತು ಮಾಹಿತಿ ಲಪಟಾಯಿಸುವ ಜಾಲ ಮಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ನಗರದ ಎಟಿಎಂಗಳ ಸದ್ಯದ ಸ್ಥಿತಿಯ ಬಗ್ಗೆ ‘ಉದಯವಾಣಿ ಸುದಿನ’ ರಿಯಾಲಿಟಿ ಚೆಕ್ ನಡೆಸಿದೆ.
ನಗರದ ವಿವಿಧ ಕಡೆಗಳ ಎಟಿಎಂ ಕೇಂದ್ರಗಳಲ್ಲಿ ನಿಯೋಜಿಸಿರುವ ಭದ್ರತಾ ಸಿಬಂದಿಗಳು ಹೆಚ್ಚಿನ ಮಂದಿ 50 ವರ್ಷ ಮೀರಿದವರು.
Related Articles
ವೆಲೆನ್ಸಿಯ ಬಳಿ ಇರುವ ಎಟಿಎಂ ಒಂದರಲ್ಲಿ 2018ರ ಜನವರಿ 27ರಂದು ಎಟಿಎಂ ದರೋಡೆಗೆ ಯತ್ನ ನಡೆಸಲಾಗಿತ್ತು. ದರೋಡೆಕೋರ ಬುರ್ಕಾ ಧಿರಿಸಿಕೊಂಡು ದರೋಡೆಗೆ ಬಂದಿದ್ದ. ಅನುಮಾನ ಬಂದ ಸ್ಥಳೀಯರು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ, ಪೊಲೀಸರನ್ನು ಕಂಡು ಆತ ಪರಾರಿಯಾಗಿದ್ದ. ಅದೇ ರೀತಿ ಇತ್ತೀಚೆಗೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಎಟಿಎಂ ಕಳವಿಗೆ ಯತ್ನ ನಡೆಸಲಾಗಿದ್ದು, ಸ್ಥಳೀಯರು ಮತ್ತು ಸಿಸಿಟಿವಿ ಫೂಟೇಜ್ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
Advertisement
ಭದ್ರತೆ ಹೇಗಿರಬೇಕು? ಎಟಿಎಂಗಳಲ್ಲಿ ಸಿಸಿಟಿವಿ ಕೆಮರಾ ಅಳವಡಿಸಬೇಕು.
ಎಟಿಎಂ ಕೋಣೆಯೊಳಗೆ ತುರ್ತು ಸೈರನ್ ಅಳವಡಿಸಬೇಕು.
ಎಮರ್ಜೆನ್ಸಿ ಬಟನ್‌ಗಳನ್ನು ಅಳವಡಿಸಬೇಕು.
ದಿನದ 24 ಗಂಟೆ ಭದ್ರತಾ ಸಿಬಂದಿ ನಿಯೋಜಿಸಬೇಕು.
ಭದ್ರತಾ ಸಿಬಂದಿಗಳಾಗಿ ಯುವಕರನ್ನು ನಿಯೋಜಿಸಬೇಕು. ಕನ್ನಡ ಬರುವುದಿಲ್ಲ
ತಂತ್ರಜ್ಞಾನಗಳ ಅರಿವಿದ್ದವರು ಮಾತ್ರ ಎಟಿಎಂಗಳಿಗೆ ತೆರಳುವುದಿಲ್ಲ. ಹೀಗಿರುವಾಗ ಹೆಚ್ಚಾಗಿ ಆಯಾ ಪ್ರಾದೇಶಿಕ ವ್ಯವಸ್ಥೆಗೆ ಅನುಗುಣವಾಗಿ ಭದ್ರತಾ ಸಿಬಂದಿಗಳನ್ನು ನೇಮಿಸಬೇಕು. ಆದರೆ ನಗರದ ಕೆಲವೊಂದು ಎಟಿಎಂ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕನ್ನಡ ಬರುವುದಿಲ್ಲ. ಇದೇ ಕಾರಣದಿಂದ ಅನೇಕ ಮಂದಿ ಎಟಿಎಂ ಗ್ರಾಹಕರು, ಕಾರ್ಡ್ ಬಗೆಗಿನ ಸಮಸ್ಯೆಗಳನ್ನು ಅವರ ಬಳಿ ಹೇಳುವಲ್ಲಿ ಭಾಷಾ ಜ್ಞಾನದ ಕೊರತೆ ಅನುಭವಿಸುತ್ತಾರೆ. ಕುರ್ಚಿ ಇದೆ; ಭದ್ರತೆ ಇಲ್ಲ
ಎಟಿಎಂಗಳಲ್ಲಿ ಭದ್ರತೆ ಸಲುವಾಗಿ ಸೆಕ್ಯೂರಿಟಿ ಗಾರ್ಡ್‌ಗಳಿರಬೇಕು. ಆದರೆ ಕೆಲವೊಂದು ಎಟಿಎಂಗಳಲ್ಲಿ ಕೇವಲ ಕುರ್ಚಿ ಮಾತ್ರ ಇದೆ. ಆದರೆ ಭದ್ರತಾ ಸಿಬಂದಿ ಕಾಣುವುದಿಲ್ಲ. ಕೆಲವು ಕಡೆ ಎಟಿಎಂ ಕೋಣೆಯ ಒಳಗಡೆ ಕುರ್ಚಿ ಅಳವಡಿಸಿದರೆ ಇನ್ನು ಕೆಲವೆಡೆ ಎಟಿಎಂ ಹೊರಗಡೆ ಕುರ್ಚಿ ಹಾಕಲಾಗಿದೆ. ಅಧಿಕಾರಿಗಳ ಗಮನಕ್ಕೆ
ಎಟಿಎಂ ಭದ್ರತಾ ಸಿಬಂದಿಯೊಬ್ಬರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರಿಗೆ ಏನಾದರೂ ಅನುಮಾನವಿದ್ದರೆ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇವೆ. ಒಂದು ವೇಳೆ ಹಣದ ಸಮಸ್ಯೆ ಉಂಟಾದರೆ ಅಥವಾ ಭದ್ರತಾ ಸಮಸ್ಯೆ ಇದ್ದರೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ತಿಳಿಸಿದ್ದಾರೆ. ನವೀನ್ ಭಟ್ ಇಳಂತಿಲ