Advertisement

ಸೀಟು ಹಂಚಿಕೆಗೆ ಬಿಗಿಪಟ್ಟು ಇಲ್ಲ: ದೇವೇಗೌಡ

01:00 AM Mar 04, 2019 | Harsha Rao |

ಮಂಗಳೂರು: ಲೋಕಸಭಾ ಚುನಾವಣೆ ಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟು
ಕೊಡುವಂತೆ ಕಾಂಗ್ರೆಸ್‌ ಜತೆಗೆ ಪ್ರಸ್ತಾಪಿಸಲಾಗಿದೆ. ಸೀಟು ಹಂಚಿಕೆ ಬಗ್ಗೆ ಬಿಗಿಪಟ್ಟಿನ ಧೋರಣೆ ಅನುಸರಿಸದೆ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

Advertisement

ಅವರು ಮಂಗಳೂರಿನಲ್ಲಿ ರವಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಗೆ 10 ದಿನಗಳಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸೀಟು ಹಂಚಿಕೆ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಭಿನ್ನಾಭಿಪ್ರಾಯ ಬರಬಾರದು ಎಂಬ ಅಭಿಪ್ರಾಯ ಎರಡೂ ಪಕ್ಷಗಳಲ್ಲೂ ವ್ಯಕ್ತವಾಗಿದೆ. ಮಾ.4ರಂದು ನಡೆಯುವ ಸಮನ್ವಯ ಸಮಿತಿ ಸಭೆಯ ನಿರ್ಧಾರ, ಅಭಿಪ್ರಾಯಗಳನ್ನು ಪರಿಗಣಿಸಿ ರಾಷ್ಟ್ರ ಮಟ್ಟದಲ್ಲಿ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಎರಡು ವಾರಗಳೊಳಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದರು.

ಬಿಜೆಪಿ ತಡೆಯುವ ಸಮಾನ ಗುರಿ
ಬಿಜೆಪಿ ಬೆಳವಣಿಗೆಯನ್ನು ತಡೆಯುವುದು ನಮ್ಮ ಮುಖ್ಯ ಗುರಿ. ಆದುದರಿಂದ ನಾವು ಎಷ್ಟು ಸೀಟು ಕೇಳುತ್ತೇವೆ, ಅವರು ಎಷ್ಟು ಕೊಡುತ್ತಾರೆ ಎಂಬುದು ಮುಖ್ಯವಲ್ಲ. ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಬೇಕು ಎಂದು ತೀರ್ಮಾನವಾಗಿದೆ. ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ 4 ಸ್ಥಾನ ಗೆದ್ದುಕೊಂಡಿದ್ದೇವೆ. ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಸೋಲಿನ ಅಂತರ ಐದೂವರೆ ಲಕ್ಷ ಮತಗಳಿಂದ 51,000ಕ್ಕೆ ಇಳಿದಿದೆ ಎಂದರು.

ರಾಜ್ಯ ಸಚಿವ ಸಂಪುಟದಲ್ಲಿ ಜೆಡಿಎಸ್‌ ಕೋಟಾದ ಎರಡು ಸ್ಥಾನ ಭರ್ತಿ ಮಾಡದಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮೋದಿ ಪ್ರಚಾರ ಸಭೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇಂಥ ರಾಜಕೀಯ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಮಾರ ಸ್ವಾಮಿಯವರು ಎರಡು ಸ್ಥಾನಗಳನ್ನು ಭರ್ತಿಮಾಡದೆ ಬಿಟ್ಟಿರಬಹುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೊಮ್ಮೆ ಜೆಡಿಎಸ್‌ ಸದೃಢವಾಗಿತ್ತು ಹಾಗೂ 3 ಶಾಸಕರನ್ನು ಹೊಂದಿತ್ತು. ಆದರೆ ಪ್ರಸ್ತುತ ಇಲ್ಲಿ ಪಕ್ಷದ ಶಕ್ತಿ ಕಮ್ಮಿ ಇದೆ ಎಂದವರು ಹೇಳಿದರು.

Advertisement

ಸ್ಥಿರ ಸರಕಾರ ಹಿಂದೆಯೂ ಇತ್ತು
ಮೋದಿಯವರು ಸಭೆಗಳಲ್ಲಿ ಪ್ರಗತಿಗೆ ಸ್ಥಿರ ಸರಕಾರ ಬೇಕು ಹಾಗೂ ತನ್ನಿಂದ ಮಾತ್ರ ಸ್ಥಿರ ಸರಕಾರ ನೀಡಲು ಸಾಧ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ. 5 ವರ್ಷಗಳ ಆಡಳಿತದಲ್ಲಿ 282 ಸ್ಥಾನ ಹೊಂದಿದ್ದರೂ ಅವರು ಎಂಥ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ ವಾಜಪೇಯಿಯವರು 23 ಪಕ್ಷಗಳನ್ನು ಸೇರಿಸಿ ಸ್ಥಿರ ಸರಕಾರ ನೀಡಿದ್ದರು ಮತ್ತು 10 ವರ್ಷಗಳಲ್ಲಿ ಡಾ| ಮನಮೋಹನ್‌ ಸಿಂಗ್‌ ಸ್ಥಿರ ಸರಕಾರ ನೀಡಿದ್ದರು ಎಂಬುದನ್ನು ಮೋದಿ ತಿಳಿದುಕೊಳ್ಳಲಿ. ಈ ದೇಶದ ಭದ್ರತೆ, ಅಖಂಡತೆಯ ಪ್ರಶ್ನೆ ಬಂದಾಗ ದೇಶದ 130 ಕೋಟಿ ಜನರು ಒಂದಾಗಿ ನಿಲ್ಲುತ್ತಾರೆ. ಇದನ್ನು ಮೋದಿಯವರಿಂದ ಕಲಿಯಬೇಕಾಗಿಲ್ಲ ಎಂದವರು ಹೇಳಿದರು. 

ಜೆಡಿಎಸ್‌ ಮುಖಂಡರಾದ ಬಿ.ಎಂ. ಫಾರೂಕ್‌, ಎಂ.ಬಿ. ಸದಾಶಿವ, ಮಹಮ್ಮದ್‌ ಕುಂಞಿ, ಅಕ್ಷಿತ್‌ ಸುವರ್ಣ, ಸುಶೀಲ್‌ ನೊರೊನ್ಹಾ, ವಸಂತ ಪೂಜಾರಿ, ರಾಮ್‌ಗಣೇಶ್‌, ಹೈದರ್‌ ಪರ್ತಿಪ್ಪಾಡಿ, ಸುಮತಿ ಹೆಗ್ಡೆ, ಕಾರ್ಪೊರೇಟರ್‌ ರಮೀಜಾ ಬಾನು, ರತ್ನಾಕರ ಸುವರ್ಣ, ದಿನಕರ ಉಳ್ಳಾಲ ಉಪಸ್ಥಿತರಿದ್ದರು. 

ಮಂಗಳೂರಿನಲ್ಲಿ  ಕೈಗಾರಿಕಾ ಕ್ಲಸ್ಟರ್‌
ಮಂಗಳೂರಿನಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ನಗರವನ್ನು ಕೈಗಾರಿಕಾ ಕೇಂದ್ರವಾಗಿ ರೂಪಿಸಬೇಕು ಎಂದು ಬಯಸಿದ್ದರೂ ಆಗಿರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ನಾನು, ಬಿ.ಎಂ. ಫಾರೂಕ್‌ ಒತ್ತಾಯಿಸುತ್ತೇವೆ ಎಂದು ದೇವೇಗೌಡ ಹೇಳಿದರು.

ಮಹಾಮೈತ್ರಿ
ಕುಮಾರಸ್ವಾಮಿಯವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಎನ್‌ಡಿಎ ಹೊರತುಪಡಿಸಿ ಎಲ್ಲ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಅವರ ಉದ್ದೇಶ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗುವುದು ಮತ್ತು ಬಿಜೆಪಿಯ ಬೆಳವಣಿಗೆಯನ್ನು ತಡೆಯುವುದು. ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ವ್ಯತ್ಯಾಸ ಇರಬಹುದು. ಚುನಾವಣೆ ಪೂರ್ವದಲ್ಲಿ ಅಥವಾ ಚುನಾವಣೆ ಬಳಿಕ ಹೊಂದಾಣಿಕೆಗಳು ಏರ್ಪಡಬಹುದು. ಎನ್‌ಡಿಎ ಬಿಟ್ಟು ಎಲ್ಲ ರಾಜಕೀಯ ಪಕ್ಷಗಳು ಇದರಲ್ಲಿ ಸೇರ್ಪಡೆಯಾಗುತ್ತವೆ ಎಂದು ದೇವೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next