Advertisement

ಎದ್ದು ಹೋದ ಡಾಮರು, ಹದಗೆಟ್ಟ ಸರ್ವಿಸ್‌ ರಸ್ತೆ; ಸಂಚಾರ ದುಸ್ತರ

10:33 AM Apr 21, 2022 | Team Udayavani |

ಸುರತ್ಕಲ್‌: ಮುಕ್ಕದಿಂದ ಕೂಳೂರು-ನಂತೂರುವರೆಗೆ ಹೆದ್ದಾರಿ ಇಲಾಖೆ ರಸ್ತೆ ನಿರ್ವಹಣೆ ಮಾಡದೆ ಎರಡು ವರ್ಷ ಕಳೆದಿವೆ. ಈ ಹಿಂದೆ ಹಾಕಲಾದ ಡಾಮರು ರಸ್ತೆಯಲ್ಲಿಯೇ ವಾಹನ ಓಡಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಂಡ ಸೃಷ್ಟಿಯಾಗಿ ದ್ವಿಚಕ್ರ ಸವಾರರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ.

Advertisement

ಸುರತ್ಕಲ್‌, ಪಣಂಬೂರು ಕೂಳೂರು ಸಹಿತ ಸುತ್ತಮುತ್ತ ಜನರಿಗೆ ನಗರವನ್ನು ಸಂಪರ್ಕಿಸುವ ಹೆದ್ದಾರಿಯೇ ಪ್ರಮುಖ ರಸ್ತೆಯಾಗಿದೆ. ಖಾಸಗಿ, ಸಿಟಿ ಬಸ್‌ಗಳು, ಆಟೋ ರಿಕ್ಷಾ ಹೀಗೆ ಸಾವಿರಾರು ವಾಹನ ಓಡಾಟ ನಡೆಸುವ ಪ್ರಮುಖ ರಸ್ತೆ. ಕೊರೊನಾ ಬಳಿಕ ರಸ್ತೆಯನ್ನು ಫೇವರ್‌ ಫಿನಿಷ್‌ ಮಾಡಲಾಗಿಲ್ಲ. ಮಾತ್ರವಲ್ಲ ನಗರ ವ್ಯಾಪ್ತಿಯಲ್ಲಿ ಸರ್ವಿಸ್‌ ರಸ್ತೆಗಳ ಸ್ಥಿತಿ ನೋಡಿದರೆ ಸ್ಮಾರ್ಟ್‌ ಸಿಟಿಗೆ ಅಪವಾದ ಎಂಬಂತಿದೆ. ಬೈಕಂಪಾಡಿ ಪ್ರದೇಶದಲ್ಲಿ ಸರ್ವಿಸ್‌ ರಸ್ತೆ, ತೋಡುಗಳು ಮಾಯವಾಗಿವೆ. ಲಾರಿಗಳ ನಿಲುಗಡೆಗೆ ಹಾಳಾದ ಸರ್ವಿಸ್‌ ರಸ್ತೆ ಬಳಕೆಯಾಗುತ್ತಿದೆ. ಹೆದ್ದಾರಿಯಲ್ಲಿ ಅಪಘಾತವಾದರೆ ಪರ್ಯಾಯ ಮಾರ್ಗವಾಗಿ ಸರ್ವಿಸ್‌ ರಸ್ತೆಗಳೇ ಪ್ರಯೋಜನಕ್ಕೆ ಬಾರದಂತಿವೆ.

ಆಳವಾದ ಹೊಂಡ ಸೃಷ್ಟಿ

ಮುಖ್ಯವಾಗಿ ಬಂದರು, ಕೈಗಾರಿಕೆ ಪ್ರದೇಶ ದಲ್ಲಾದರೂ ರಸ್ತೆ ನಿರ್ವಹಣೆ ಕಾರ್ಯ ನಡೆಸದೆ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ. ರಸ್ತೆ ಬದಿಯ ಆಳವಾದ ಹೊಂಡಗಳಿಂದ ದ್ವಿಚಕ್ರ ಸವಾರರು ಪ್ರಾಣಭೀತಿ ಎದುರಿಸುತ್ತಿದ್ದಾರೆ. ರಸ್ತೆ ಬದಿ ಇರುವ ಪೆಟ್ರೋಲ್‌ ಬಂಕ್‌ನಿಂದ ತಿರುವು ಪಡೆಯುವ ಲಾರಿಗಳಿಂದ ರಸ್ತೆಗಳ ಇಕ್ಕೆಲಗಳಲ್ಲಿ ಹೊಂಡಮಯವಾಗಿ ವಾಹನ ಇಳಿಸಲು ಸಾಧ್ಯವಾಗದ ಸ್ಥಿತಿಯಿದೆ.

ನಗರ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯನ್ನು ಸ್ಥಳೀಯ ಆಡಳಿತ ನಿರ್ವಹಣೆ ಮಾಡಬೇಕು, ಬಂದರು ವ್ಯಾಪ್ತಿಯಲ್ಲಿ ಬಂದರು ಇಲಾಖೆ ಮಾಡಬೇಕು ಎಂಬುದು ಹೆದ್ದಾರಿ ಇಲಾಖೆಯ ಹೇಳಿಕೆ. ಆದರೆ ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನ ಕೇಳಿದರೆ ಸ್ಪಷ್ಟತೆಯಿಲ್ಲ. ಸೂಕ್ತ ನಿರ್ವಹಣೆ ಕೊರತೆ, ದುರಸ್ತಿ ಕಾಮಗಾರಿ ವೈಫಲ್ಯಗಳಿಂದಾಗಿ ರಾ. ಹೆದ್ದಾರಿಗಳ ಅವ್ಯವಸ್ಥೆಗೆ ಜನ ಪ್ರಾಣ ಕಳೆದುಕೊಳ್ಳುವಂತಾಗಿದೆ.

Advertisement

ಸುಗಮ ಸಂಚಾರಕ್ಕೆ ಮಾರಕ

ಡಾಮರು, ರಸ್ತೆ ದೀಪ, ರಸ್ತೆಗಳ ತಡೆಗೋಡೆ, ಮೇಲ್ಸೇತುವೆ, ಕೆಳಸೇತುವೆ, ರಸ್ತೆ ಸೂಚಕಗಳು, ಪಾದಚಾರಿ ಮೇಲ್ಸೇತುವೆಗಳ ನಿರ್ವಹಣೆಯಲ್ಲಿ ಪ್ರಾಧಿಕಾರ ಹಿಂದೆ ಬಿದ್ದಿದೆ. ರಸ್ತೆಗಳ ತಡೆ ಗೋಡೆಗಳಲ್ಲಿ ಗಿಡಗಳು ಬೆಳೆದುಕೊಂಡಿವೆ. ರಸ್ತೆಗಳ ಇಕ್ಕೆಲಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣದಷ್ಟು ಹುಲ್ಲು ಬೆಳೆದಿದ್ದು, ಕಟಾವು ಕಾರ್ಯ ನಡೆದಿಲ್ಲ. ಬಿಸಿಲ ಬೇಗೆಗೆ ಡಾಮರು ಹಂಪ್ಸ್‌ಗಳಂತೆ ಅಲಲ್ಲಿ ಮೇಲೆದ್ದು ನಿಂತಿದ್ದು, ಸುಗಮ ಸಂಚಾರಕ್ಕೆ ಮಾರಕವಾಗಿದೆ.

ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು

ರಾಷ್ಟ್ರೀಯ ಹೆದ್ದಾರಿ 66ರ ಬಂದರು ಸುತ್ತಮುತ್ತ ತೇಪೆ ಕಾರ್ಯವನ್ನು ನವಮಂಗಳೂರು ಬಂದರು ನೋಡಿಕೊಳ್ಳಬೇಕಿದೆ. ಈ ಭಾಗವನ್ನು ಪೋರ್ಟ್‌ ರೋಡ್‌ ಸಂಪರ್ಕ ಎಂದು ಗುರುತಿಸಲ್ಪಟ್ಟಿದೆ. ಈ ಬಗ್ಗೆ ಬಂದರು ಇಲಾಖೆಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗುವುದು. -ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿಗಳು, ದ.ಕ.

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.