Advertisement

ನಾಡಿನಲ್ಲಿ ಕೋಮುಗಲಭೆಗೆ ಅವಕಾಶವಿಲ್ಲ: ಸಿದ್ದರಾಮಯ್ಯ

02:10 PM Dec 06, 2017 | Team Udayavani |

ಶಿಗ್ಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.  ಯುಡಿಯೂರಪ್ಪ ಅವರ ದಿಕ್ಸೂಚಿ ಪ್ರಕಾರ ಮುಂದಿನ ಅವಧಿಗೆ ಮತ್ತೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದ ಪುರಸಭೆ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಅವರು ಈ ಉಪಚುನಾವಣೆಯ
ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎಂದಿದ್ದರು. ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಅವರ ದಿಕ್ಸೂಚಿ ಪ್ರಕಾರ ಅಧಿಕಾರ ನಮಗೆ ಖಚಿತ ಎಂದರು.

ನಮ್ಮದು ಬಸವಣ್ಣ, ಶಿಶುನಾಳ ಶರೀಫ, ಕನಕದಾಸರಂತಹ ಸಂತರು, ಶರಣರ ನಾಡು. ಇಲ್ಲಿ ಕೋಮು ಗಲಭೆ ಎಬ್ಬಿಸುವವರಿಗೆ ಅವಕಾಶವಿಲ್ಲ. ಜನರು ನಿಮ್ಮನ್ನು ಬೆಂಬಲಿಸುವುದಿಲ್ಲ. ದೇಶದ 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಆ ಯಾವುದೇ ರಾಜ್ಯದಲ್ಲಿಯೂ ಬಡವರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿಲ್ಲ. ಆದರೆ ರಾಜ್ಯದಲ್ಲಿ ನಾವು ಕೊಡುತ್ತಿದ್ದೇವೆ ಎಂದರು.

ಬಂಡವಾಳ ಹೂಡಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಗುಜರಾತ ರಾಜ್ಯವನ್ನು ಹಿಂದೆ ಸರಿಸಿ ನಾವು ನಂ. 1 ಸ್ಥಾನದಲ್ಲಿದ್ದೇವೆ. ನಮ್ಮ ಅರ್ಧದಷ್ಟು ಬಂಡವಾಳವೂ ಗುಜರಾತ್‌ಗೆ ಬರುತ್ತಿಲ್ಲ. ಹಾಲು ಉತ್ಪಾದನೆಯಲ್ಲಿ ಗುಜರಾತ್‌ ನಂತರ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದರು. ಯಾವುದೇ ಒಂದು ಪಕ್ಷ ಐದು ವರ್ಷ ಅಧಿಕಾರ ನಡೆಸಿದಾಗ ಅದರ ವಿರುದ್ಧ ಅಲೆ ಏಳುವುದು
ಸಾಮಾನ್ಯ. ಆದರೆ ರಾಜ್ಯದಲ್ಲಿ ನಾವು ನುಡಿದಂತೆ ನಡೆದ ಪರಿಣಾಮ ನಮ್ಮ ವಿರುದ್ಧ ಎಲ್ಲಿಯೂ ವಿರೋಧಿ ಅಲೆಯಿಲ್ಲ. ಜನರು ನಮ್ಮನ್ನು ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದಾರೆ ಎಂದರು.

ನಾವು ಮಾಡಿದ ಸಾಧನೆಯನ್ನು ಮಾತ್ರ ಹೇಳುತ್ತಿದ್ದೇವೆ. ನಮ್ಮ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರವೂ ನಡೆದಿಲ್ಲ. ನಮ್ಮ ಹಗರಣ ಬಯಲು ಮಾಡುತ್ತೇವೆ ಎಂದು ಸುಳ್ಳು ಹೇಳುವ ಬಿಜೆಪಿಯವರು ಅಧಿವೇಶನದಲ್ಲಿ ಬಯಲು ಮಾಡಬೇಕಿತ್ತು. ಬಿಜೆಪಿಯವರು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಅವರ ಸುಳ್ಳನ್ನು ಜನ ನಂಬುವುದಿಲ್ಲ ಎಂದರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ
ಮಾತನಾಡಿ, ಚುನಾವಣೆಗೆ ಮೊದಲೇ ಘೋಷಣೆ ಮಾಡಿದಂತೆ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡಿಲ್ಲ. ಅಲ್ಲದೇ ವಿದೇಶದಲ್ಲಿನ ಕಪ್ಪು ಹಣ ತರುವಲ್ಲಿ ಕೇಂದ್ರದ ಮೋದಿ ಸರ್ಕಾರ ವಿಫಲವಾಗಿದೆ ಎಂದರು. 

Advertisement

ಮಾಜಿ ಶಾಸಕ ಅಜಂಪೀರ ಖಾದ್ರಿ ಮಾತನಾಡಿ, 15 ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲದೇ ಇದ್ದರೂ ಸಾವಿರಾರು ಕಾರ್ಯಕರ್ತರ ಬೆಂಬಲ ಉಳಿಸಿಕೊಂಡಿದೆ. ಪಕ್ಷದ ಕಾರ್ಯ ಸೂಚಿಯಂತೆ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಮೂಲಕ
ಪಕ್ಷವನ್ನು ಸದೃಢಗೊಳಿಸಲಾಗಿದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಸಚಿವ ವಿನಯ ಕುಲಕರ್ಣಿ ಮಾತನಾಡಿದರು. ತಾಲೂಕು ಅಧ್ಯಕ್ಷ ಎಂ.ಎನ್‌. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ರುದ್ರಪ್ಪ ಲಮಾಣಿ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ರಾಜೇಶ್ವರಿ ಪಾಟೀಲ, ಜಿಪಂ ಸದಸ್ಯೆ ದೀಪಾ ಅತ್ತಿಗೇರಿ, ಬಸವನಗೌಡ ದೇಸಾಯಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next