ನವದೆಹಲಿ: ವಂದೇ ಮಾತರಂ ಜಪಿಸುವುದನ್ನು ಒಪ್ಪಿಕೊಳ್ಳಲು ಯಾರಿಗೆ ಸಾಧ್ಯವಿಲ್ಲವೋ ಅವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಎಂಬುದು 2014 ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಪ್ರವೇಶಿಸಿದ ಮುಸ್ಲೀಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದ್ದು ಇದನ್ನು ಕಾಂಗ್ರೆಸ್ 70 ವರ್ಷಗಳ ಮೊದಲೇ ಜಾರಿಗೆ ತರಬೇಕಾಗಿತ್ತು ಎಂದಿದ್ದಾರೆ.
ಕೆಲವು ನಾಯಕರು ಅಂದು ಮಾಡಿದ ವಿಭಜನೆಯ ಪಾಪಕ್ಕೆ ಈ ಕಾಯ್ದೆ ಪ್ರಾಯಶ್ಚಿತ ಮಾರ್ಗವಾಗಿದೆ. ಅದಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಬೇಕು. 1947 ರಲ್ಲಿ ಭಾರತದ ವಿಭಜನೆ ಎಂಬುದು ಕೋಮು ಆಧಾರದ ಮೇಲೆ ನಡೆದಿತ್ತು. ಇದು ಯಾವುದೇ ರಾಜಕೀಯ ಆರ್ಥಿಕ, ಭೌಗೋಳಿಕ , ಅಥವಾ ಐತಿಹಾಸಿಕ ಆಧಾರದ ಮೇಲೆ ನಡೆಯಲಿಲ್ಲ. ನಾವು ಮುಸ್ಲಿಮರೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಯಾವತ್ತೂ ಹೇಳಲಿಲ್ಲ. ನಾವು ಅವರೊಂದಿಗೆ ಸಾವಿರಾರು ವರ್ಷಗಳಿಂದ ಸೌಹಾರ್ಧಯುತವಾಗಿ ಬಾಳುತ್ತಿದ್ದೇವೆ ಎಂದರು.
ದೇಶವು ಯಾರ ಆಸ್ತಿ ಕೂಡ ಅಲ್ಲ. ಅದನ್ನು ವಿಭಜಿಸುವ ಹಕ್ಕು ಕೂಡ ಯಾರಿಗೂ ಇರಲಿಲ್ಲ. ಉಚಿತ ನೀರು ಮತ್ತು ವಿದ್ಯುತ್ ರಾಷ್ಟ್ರವನ್ನು ಆಭಿವೃದ್ದಿಪಡಿಸುವುದಿಲ್ಲ ಎಂದು ಹರಿಹಾಯ್ದರು.
ಸಿಎಎ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿ ಹರಡಿ, ದೇಶದಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದು ಸಾರಂಗಿ ಆರೋಪಿಸಿದರು. “ದೇಶಕ್ಕೆ ಬೆಂಕಿ ಹಚ್ಚಿದವರು ದೇಶಭಕ್ತರಲ್ಲ. ಭಾರತದ ಸ್ವಾತಂತ್ರ್ಯ, ಐಕ್ಯತೆ, ವಂದೇ ಮಾತರಂ ಅನ್ನು ಸ್ವೀಕರಿಸದವರಿಗೆ ದೇಶದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ. ಅವರು ಎಲ್ಲಿ ಬೇಕಾದರೂ ಹೋಗಬೇಕು” ಎಂದು ಅವರು ಹೇಳಿದರು.