ಗುವಾಹಟಿ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮುಂದುವರಿದಿರುವ ನಡುವೆ ಹಬ್ಬದೂಟ ಮಾಡಲು ಮನೆಯಲ್ಲಿ ಅಕ್ಕಿ, ಬೇಳೆ ಕಾಳು ಖಾಲಿಯಾದ ಹಿನ್ನೆಲೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನೇ ಕೊಂದು ಹಬ್ಬದಡುಗೆ ಮಾಡಿದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಕಾಳಿಂಗ ಸರ್ಪ(ಕಿಂಗ್ ಕೋಬ್ರಾ)ವನ್ನು ಕೊಂದ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭರ್ಜರಿ ಸದ್ದು ಮಾಡಿದೆ. ಮೂವರು ಕಾಳಿಂಗ ಸರ್ಪವನ್ನು ಕೊಂದು ಭುಜದ ಮೇಲೆ ಹೊತ್ತು ನಿಂತಿರುವ ದೃಶ್ಯ ಸೆರೆಯಾಗಿದ್ದು, ಕಾಡಿನಲ್ಲಿ ಕಾಳಿಂಗ ಸರ್ಪವನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.
ಹಬ್ಬ ಮಾಡಲು ಇವರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದು, ಬಾಳೆ ಎಲೆಗಳನ್ನು ಹರಡಿ ಇಟ್ಟು ಕಾಳಿಂಗ ಸರ್ಪದ ಮಾಂಸವನ್ನು ಸ್ವಚ್ಚಗೊಳಿಸಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಕ್ಕಿ ಕೂಡಾ ಖಾಲಿಯಾಗಿತ್ತು ಎಂದು ವ್ಯಕ್ತಿಯೊಬ್ಬ ಹೇಳಿರುವುದು ವಿಡಿಯೋದಲ್ಲಿದೆ.
ಮನೆಯಲ್ಲಿ ಏನೂ ಇಲ್ಲದ ಕಾರಣ ನಾವು ಕಾಡಿನಲ್ಲಾದರೂ ಏನಾದರು ಸಿಗಬಹುದು ಎಂದು ಹುಡುಕುತ್ತಾ ಬಂದಾಗ ಕಾಳಿಂಗ ಸರ್ಪ ಸಿಕ್ಕಿತ್ತು. ನಂತರ ಅದನ್ನೇ ಹೊಡೆದು ಕೊಂದು ತಂದಿರುವುದಾಗಿ ಮತ್ತೊಬ್ಬ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು
ವರದಿ ವಿವರಿಸಿದೆ.
ಇವರ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಮೂವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಾಳಿಂಗ ಸರ್ಪ ಸಂರಕ್ಷಿತ ಸರಿಸೃಪವಾಗಿದೆ. ಕಾನೂನಿನ ಪ್ರಕಾರ ಕಾಳಿಂಗ ಸರ್ಪವನ್ನು ಕೊಲ್ಲುವುದು ಅಪರಾಧ ಮತ್ತು ಇದು ಜಾಮೀನುರಹಿತ ಪ್ರಕರಣವಾಗಿದೆ. ಅರುಣಾಚಲಪ್ರದೇಶ ಅಳಿವಿನ ಅಂಚಿನಲ್ಲಿರುವ ವಿವಿಧ ಹಾವಿನ ಪ್ರಬೇಧಗಳ ಸಂರಕ್ಷಿತ ತಾಣವಾಗಿದೆ ಎಂದು ವರದಿ ತಿಳಿಸಿದೆ.