ದೇವನಹಳ್ಳಿ: ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆ ಮತ್ತು ನೋವು, ನಲಿವುಗಳಿಗೆ ಸ್ಪಂದಿಸುವುದಕ್ಕೆ ಕೇಂದ್ರ-ರಾಜ್ಯ ಸರ್ಕಾರ ಸದಾ ಸಿದ್ಧವಿದ್ದು ಯಾವುದೇ ಕಾರಣಕ್ಕೂ ರೈತರು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ವೈರಸ್ ಸೋಂಕು ನಿವಾರಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ಕೃಷಿ ಇಲಾಖೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ವರದಿ ಸಲ್ಲಿಕೆ:ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ. ಅದೇ ರೀತಿ ಪೂರಕ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಮುಂಗಾರಿಗೆ ಬಿತ್ತನೆ ಬೀಜಗಳನ್ನು ರೈತರಿಗೆ ನಿಗದಿತ ಸಮಯದಲ್ಲಿ ನೀಡಬೇಕು. ರಾಜ್ಯದ 21 ಜಿಲ್ಲೆಯಲ್ಲಿ ಪ್ರವಾಸ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ 19 ಜಿಲ್ಲೆಗಳ ವಸ್ತು ಸ್ಥಿತಿ ರೈತರ ಸಮಸ್ಯೆಗಳ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದೇನೆಂದರು. ರೈತರಿಗೆ ಹಸಿರು ಪಾಸ್ ನೀಡಲಾಗಿದೆ. ಕೇಂದ್ರದಿಂದ ಖರೀದಿಸಿರುವ ರಾಗಿಗೆ 1200 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು ಶೀಘ್ರ ರೈತರ ಖಾತೆಗೆ ಜಮೆ ಆಗಲಿದೆ ಎಂದರು.
ಶಾಸಕ ರಾದ ಎಲ್.ಎನ್.ನಾರಾಯಣ ಸ್ವಾಮಿ, ವೆಂಕಟ ರಮಣಯ್ಯ, ಶ್ರೀನಿ ವಾಸ ಮೂರ್ತಿ, ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಆರ್.ದೇವೇಗೌಡ ಮಾತನಾಡಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ಲಾಕ್ ಡೌನ್‌ನಿಂದಾಗಿ ಕೃಷಿ ಚಟುವಟಿಗೆ ಪೂರಕವಾಗಿರುವ ಟ್ರಾÂಕ್ಟರ್ ಗ್ಯಾರೇಜ್, ಬಿತ್ತನೆ ಬೀಜ, ಗೊಬ್ಬರದ ಅಂಗಡಿ, ಹಾರ್ಡ್‌ವೇರ್ ಅಂಗಡಿ ತೆರೆದರೆ ರೈತರಿಗೆ ಅನುಕೂಲವಾಗುವುದು ಎಂದು ತಿಳಿಸಿದರು. ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ರೈತರು ಬೆಳೆಗೆ ಪರಿಹಾರ ಒದಗಿಸಿ, ಹೆಚ್ಚು ಹೊತ್ತು ವಿದ್ಯುತ್ ನೀಡಬೇಕೆಂದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಗಿರೀಶ್, ರಾಗಿ ಜೂನ್ 15 ರಿಂದ ಜುಲೈ ಅಂತ್ಯದವರೆಗೆ ಬಿತ್ತನೆ ಮಾಡಲಾಗುವುದು. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮೇ ಮೊದಲೇ ವಾರ ಬಿತ್ತನೆ ಬೀಜ ದಾಸ್ತಾನು ಮಾಡಿ ಮೇ 2ನೇ ವಾರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು. ರಸಗೊಬ್ಬರದ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಸಿಇಒ ಎನ್. ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣ ನವರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮತ್ತಿತರರಿದ್ದರು.