ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಗಲ್ಲುಶಿಕ್ಷೆಯನ್ನು ಮತ್ತೊಮ್ಮೆ ತಡೆಹಿಡಿಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸನ್ನಿವೇಶಗಳ ಪ್ರಕಾರ ಎಲ್ಲಾ ಕಾನೂನು ಅವಕಾಶ ಬಳಸಿಕೊಂಡಿದ್ದೀರಿ..ಇನ್ಯಾವುದೇ ಅವಕಾಶಗಳು ಬಾಕಿ ಉಳಿದಿಲ್ಲ. ನಿನಗೆ(ಮುಕೇಶ್ ಸಿಂಗ್) ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ದೊರಕಿದೆ. ಅದು ವಜಾಗೊಂಡಿದೆ. ಕ್ಯೂರೇಟಿವ್ ಅರ್ಜಿ ಕೂಡಾ ವಜಾಗೊಂಡಿದೆ. ಇನ್ನೇನು ಅವಕಾಶ ಉಳಿದಿದೆ ಎಂದು ಸುಪ್ರೀಂಕೋರ್ಟ್ ಕೇಳಿರುವುದಾಗಿ ವರದಿ ತಿಳಿಸಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಶುಕ್ರವಾರ ಬೆಳಗ್ಗಿನ ಜಾವ 6ಗಂಟೆಗೆ ನೇಣುಗಂಬಕ್ಕೆ ಏರಲಿದ್ದಾರೆ. ನನ್ನ ಪರವಾಗಿ (ಆ್ಯಮಿಕಸ್ ಕ್ಯೂರಿ) ವಾದ ಮಂಡಿಸಿದ್ದ ವಕೀಲರಾದ ವೃಂದಾ ಗ್ರೋವರ್ ದಾರಿ ತಪ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ನನಗೆ ನ್ಯಾಯಾಂಗ ಹೋರಾಟದ ಎಲ್ಲಾ ಅವಕಾಶಗಳನ್ನು ಮರಳಿ ಕಲ್ಪಿಸಿಕೊಡಬೇಕೆಂದು ಮುಖೇಶ್ ಸಿಂಗ್ ಸುಪ್ರೀಂಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ್ದ.
ವಕೀಲ ಎಂಎಲ್ ಶರ್ಮಾ ಮೂಲಕ ಶರ್ಮಾ ಅರ್ಜಿ ಸಲ್ಲಿಸಿದ್ದ. ಪ್ರಕರಣದ ಆ್ಯಮಿಕಸ್ ಕ್ಯೂರಿ ಗ್ರೋವರ್, ದಿಲ್ಲಿ ಸರ್ಕಾರ, ಕೇಂದ್ರ ಸರ್ಕಾರ ಕ್ರಿಮಿನಲ್ ಸಂಚು ನಡೆಸಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿದ್ದ.
ಮುಖೇಶ್ ಸಿಂಗ್ ನ ಎಲ್ಲಾ ವಾದವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಕಾನೂನು ಹೋರಾಟದ ಬಾಗಿಲು ಮುಚ್ಚಿದೆ ಎಂದು ಹೇಳುವ ಮೂಲಕ ನಿಗದಿತ ದಿನಾಂಕದಂದು ಅಪರಾಧಿಗಳು ಗಲ್ಲಿಗೇರುವ ಹಾದಿ ಸುಗಮವಾದಂತಾಗಿದೆ.