ಬೆಂಗಳೂರು: ಐ ಮಾನಿಟರಿ ಎಡ್ವೈಸರಿ (ಐಎಂಎ) ಹಗರಣದಲ್ಲಿ 1 ಲಕ್ಷಕ್ಕಿಂತ ಅಧಿಕ ಮೊತ್ತ ಹೂಡಿಕೆ ಮಾಡಿದ ಬರೋಬ್ಬರಿ 56 ಸಾವಿರ ಮಂದಿಗೆ ಪರಿಹಾರ ಸಿಗುವುದೇ ಮರೀಚಿಕೆಯಾಗಿದೆ. ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಐಎಂಎ ಹಗರಣದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ರಚಿಸಿರುವ ಸಕ್ಷಮ ಪ್ರಾಧಿಕಾರವು ಪತ್ತೆಹಚ್ಚಿರುವ ಐಎಂಎ ಆಸ್ತಿಗಳ ಮೊತ್ತ ಲೆಕ್ಕಹಾಕಿದರೆ ಲಕ್ಷಾಂತರ ರೂ. ಹೂಡಿಕೆ ದಾರರ ಅಸಲು ದುಡ್ಡು ಮರಳಿಸುವುದೂ ಕಷ್ಟಸಾಧ್ಯ. 50 ಸಾವಿರಕ್ಕಿಂತ ಕಡಿಮೆ ಹೂಡಿಕೆ ಮಾಡಿರುವ 8,500 ಗ್ರಾಹಕರಿಗೆ ಸಂಪೂರ್ಣ ದುಡ್ಡು ವಾಪಾಸ್ಸಾಗಿದೆ. ಆದರೆ, ವಂಚನೆಯಾಗಿ 4 ವರ್ಷ ಕಳೆದರೂ 1 ಲಕ್ಷಕ್ಕಿಂತ ಅಧಿಕ ಮೊತ್ತ ಹೂಡಿದ 56 ಸಾವಿರ ಮಂದಿಗೆ ಬಿಡುಕಾಸೂ ಸಿಕ್ಕಿಲ್ಲ. ಶೇ.85 ವಂಚಿತರು ಅಸಲು ದುಡ್ಡು ಸಿಗುವ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ. ಆದರೆ, ಸಕ್ಷಮ ಪ್ರಾಧಿ ಕಾರದ ಖಾಜಾನೆಯಲ್ಲಿ ದುಡ್ಡಿಲ್ಲದೇ ಬರಿದಾಗಿದೆ.
“ಇಡಿ’ಯಿಂದ ತೊಡಕು: ಸಕ್ಷಮ ಪ್ರಾಧಿಕಾರ ಜಪ್ತಿ ಮಾಡಿರುವ ಐಎಂಎಗೆ ಸಂಬಂಧಿಸಿದ ಕೆಲವೊಂದು ಆಸ್ತಿಯನ್ನೇ ಜಾರಿ ನಿರ್ದೇಶ ನಾಲ ಯವೂ (ಇಡಿ) ಜಪ್ತಿ ಮಾಡಿದೆ. ಕೇಂದ್ರದ ಅಧೀನದಲ್ಲಿರುವ ಇಡಿ ಸಂಸ್ಥೆಯು ಅಪರಾಧ ಪ್ರಕರಣದಡಿ ಐಎಂಎ ಆಸ್ತಿ ಮುಟ್ಟುಗೋಲು ಹಾಕಿ ಸರ್ಕಾರದ ವಶಕ್ಕೆ ನೀಡಿದೆ. ಐಎಂಎಗೆ ಸೇರಿದ ಚಿನ್ನ, ಕಾರು, ಪೀಠೊಪಕರಣ, ನಗದು ಸಕ್ಷಮ ಪ್ರಾಧಿಕಾರದ ವಶದಲ್ಲಿದೆ. ಆದರೆ, ಹೆಚ್ಚಿನ ಬೆಲೆ ಬಾಳುವ ಅಂಗಡಿಗಳು, ನಿವೇಶನ, ಪ್ಲ್ರಾಟ್‌ಗಳು, ಜಮೀನು ಸೇರಿ ಅಂದಾಜು 150 ಕೋಟಿ ರೂ. ಮೊತ್ತದ ಆಸ್ತಿ ಇಡಿ ಜಪ್ತಿ ಮಾಡಿದೆ. ಹೀಗಾಗಿ ಈ ಆಸ್ತಿ ಹರಾಜು ಹಾಕಲು ಇಡಿಯಿಂದ ತೊಡಕಾಗಿದೆ. ಐಎಂಎ ಪ್ರಕರಣದ ತನಿಖೆ ನಡೆಸಿ ನ್ಯಾಯಾ ಲಯಕ್ಕೆ ಇಡಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಕೋರ್ಟ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಈ ವಿಚಾರವನ್ನು ನ್ಯಾಯಾಲಯದ ಗಮನ ಕ್ಕೆ ತಂದು ಇಡಿ ಜಪ್ತಿ ಮಾಡಿರುವ ಆಸ್ತಿಯನ್ನು ಸಕ್ಷಮ ಪ್ರಾಧಿಕಾರ ವಶಕ್ಕೆ ಪಡೆಯಲು ಚಿಂತಿಸಿದೆ.
ಹೊರ ರಾಜ್ಯದಲ್ಲಿ ಹೂಡಿಕೆ: ದೆಹಲಿಯಲ್ಲಿ ನಿವೇಶನ, ಪ್ಲ್ರಾಟ್‌ಗಳಲ್ಲಿ 10 ಕೋಟಿ ರೂ., ಉತ್ತರ ಪ್ರದೇಶದಲ್ಲಿ ಉದ್ಯಮದ ಮೇಲೆ 6 ಕೋಟಿ ರೂ. ಅನ್ನು ಐಎಂಎ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ಹೂಡಿಕೆ ಮಾಡಿದ್ದಾನೆ. ಅಲ್ಲಿನ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲೇ ಆಸ್ತಿಯ ಮೌಲ್ಯ ನಿಗದಿಪಡಿಸಿಕೊಂಡು ಮಾರಾಟ ಮಾಡಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ. ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಹಿಡಿಯಲಿದೆ. ಇನ್ನು ಐಎಂಎನಲ್ಲಿ ಹೂಡಿಕೆ ಮಾಡಿರುವ ದುಡ್ಡನ್ನು ಮನ್ಸೂರ್ ಅಲಿ ಖಾನ್ ಟ್ರಸ್ಟ್ ಹೆಸರಲ್ಲಿ ದುಂದು ವೆಚ್ಚ ಮಾಡಿರುವುದು ಗೊತ್ತಾಗಿದೆ. ವಿದೇಶ ದಲ್ಲಿ ಹೂಡಿಕೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.
4 ಸಾವಿರ ಹೂಡಿಕೆದಾರರು ಅನರ್ಹರು: 1,400 ಕೋಟಿ ರೂ. ಐಎಂಎ ವಂಚನೆಯಲ್ಲಿ ಸಂತ್ರಸ್ತರಿಗೆ ಕೇವಲ 20 ಕೋಟಿ ರೂ. ಹಂಚಿಕೆಯಾಗಿದೆ. ಇನ್ನೂ 1,380 ಕೋಟಿ ರೂ. ಹಿಂತಿರುಗಿಸಲು ಬಾಕಿ ಇದೆ. ಸೂಕ್ತ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 4 ಸಾವಿರ ಹೂಡಿಕೆದಾರರು ದುಡ್ಡು ಪಡೆಯಲು ಅನರ್ಹರೆಂದು ಪರಿಗಣಿಸಲಾಗಿದೆ. ಸದ್ಯ ಐಎಂಎ ಸಂಸ್ಥೆಗೆ ಸೇರಿದ 65 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿ ಸಕ್ಷಮ ಪ್ರಾಧಿಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಇದನ್ನು ಹರಾಜು ಹಾಕಿ ಸಂತ್ರಸ್ತರಿಗೆ ದುಡ್ಡು ಹಿಂತಿರುಗಿಸಲು ನ್ಯಾಯಾಲಯದ ಅನುಮತಿಗಾಗಿ ಪ್ರಾಧಿಕಾರ ಕಾದು ಕುಳಿತಿದೆ.
ಜಪ್ತಿ ಮಾಡಿದ ದುಡ್ಡನ್ನು ಸಂತ್ರಸ್ತರಿಗೆ ಹಂತ ವಾಗಿ ಹಂಚಿಕೆ ಮಾಡಲಾಗುವುದು. ಇತ್ತೀಚೆಗೆ ಸಕ್ಷಮ ಪ್ರಾಧಿಕಾರ ಜಪ್ತಿ ಮಾಡಿರುವ ಐಎಂಎ ಆಸ್ತಿ ಹರಾಜು ಹಾಕಲು ಕೋರ್ಟ್ ಅನುಮತಿ ಬೇಕಿದೆ. ಇಂತಹ ಹಗರಣದಲ್ಲಿ ಹೂಡಿಕೆದಾರರಿಗೆ ಹಣ ಮರಳಿಸಲು ಸಮಯ ಹಿಡಿಯುತ್ತದೆ.
–ಆದಿತ್ಯ ಆಮ್ಲನ್ ಬಿಸ್ವಾಸ್, ಐಎಂಎ ಸಕ್ಷಮ ಪ್ರಾಧಿಕಾರದ ಅಧಿಕಾರಿ.
–ಅವಿನಾಶ ಮೂಡಂಬಿಕಾ