Advertisement
ಏಕವ್ಯಕ್ತಿ ಎಪಿಎಲ್ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ. ಹಾಗೂ ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕಾರ್ಡ್‌ಗೆ ಪ್ರತೀ ತಿಂಗಳಿಗೆ ಗರಿಷ್ಠ 10 ಕೆ.ಜಿ. ಅಕ್ಕಿಯನ್ನು ಕೆ.ಜಿ.ಗೆ 15 ರೂ.ಗಳಂತೆ ನೀಡಲಾಗುತ್ತದೆ. ಎಷ್ಟೇ ಸದಸ್ಯರಿದ್ದರೂ ಎಪಿಎಲ್ ಕಾರ್ಡ್‌ಗೆ ತಿಂಗಳಿಗೆ 10 ಕೆ.ಜಿ.ಗಿಂತ ಜಾಸ್ತಿ ಅಕ್ಕಿ ನೀಡುವುದಿಲ್ಲ. ಅಕ್ಕಿ ಬೇಕು ಎಂದು ಮನವಿ ಸಲ್ಲಿಸಿದವರಿಗೆ ಮಾತ್ರ ಎಪಿಎಲ್ ಕಾರ್ಡ್‌ನಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಆದರೆ ಮೂರ್‍ನಾಲ್ಕು ತಿಂಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಸಿಗುತ್ತಿಲ್ಲ.
ಸ್ಥಳೀಯವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೆಲವೊಂದು ತಾಲೂಕುಗಳಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ವಿತರಣೆ ಮಾಡುತ್ತಿದ್ದಾರೆ. ಅದು ಕೂಡ ತೀರಾ ಕಡಿಮೆ ಇರುವುದರಿಂದ ಆ ನಿರ್ದಿಷ್ಟ ತಾಲೂಕಿನ ಅರ್ಹ ಕಾರ್ಡ್‌ದಾರರೆಲ್ಲರಿಗೂ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಆಂಧ್ರ ಅಥವಾ ಮಹಾರಾಷ್ಟ್ರದಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜನವರಿ ಅಂತ್ಯದೊಳಗೆ ಜಿಲ್ಲೆಗೆ ಅಕ್ಕಿ ಬರಬಹುದು. ಅಕ್ಕಿ ಬಂದ ಅನಂತರದಲ್ಲಿ ಹಂಚಿಕೆ ಪ್ರಕ್ರಿಯೆ ಮಾಡಲಿದ್ದೇವೆ. ಈ ಹಿಂದಿನ ತಿಂಗಳಿನ ಅಕ್ಕಿ ಸೇರಿಸಿ ನೀಡಬೇಕೋ ಅಥವಾ ಪ್ರಸ್ತುತ ತಿಂಗಳಿಗೆ ಮಾತ್ರ ನೀಡಬೇಕೋ ಎಂಬುದನ್ನು ಸರಕಾರದ ಆದೇಶದಂತೆ ಮುಂದುವರಿಯಲಿದ್ದೇವೆ. ಕೇಂದ್ರ ಸರಕಾರದಿಂದ ಎಪಿಎಲ್ ಕಾರ್ಡ್‌ಗೆ ಎಷ್ಟು ಅಕ್ಕಿ ನೀಡಲಾಗುತ್ತಿದೆಯೋ ಅಷ್ಟನ್ನು ಮಾತ್ರ ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಪ್ರತ್ಯೇಕವಾಗಿ ಖರೀದಿಸಬೇಕಾಗಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಾಸವಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
Related Articles
ಹಣ ಪಾವತಿ ಮಾಡಿದರೂ ಸರಕಾರ ಸರಿಯಾದ ಸಮಯದಲ್ಲಿ ಅಕ್ಕಿ ನೀಡದೆ ಇರುವುದು ಸರಿಯಲ್ಲ. ಅಕ್ಕಿ ನೀಡುವುದಿಲ್ಲ ಎಂದಾದರೂ ಮುಂಚಿತವಾಗಿ ಹೇಳಬೇಕು ಅಥವಾ ನಿರ್ದಿಷ್ಟ ಕಾರಣದಿಂದ ಅಕ್ಕಿ ಬಂದಿಲ್ಲ ಎಂದಾದರೂ ತಿಳಿಸಬೇಕು. ಯಾವುದನ್ನೂ ಸರಿಯಾಗಿ ಹೇಳುತ್ತಿಲ್ಲ. ಪ್ರತೀ ತಿಂಗಳು ನ್ಯಾಯಬೆಲೆ ಅಂಗಡಿಗೆ ಹೋಗಿ ವಾಪಸ್ ಬರುವುದೇ ಆಗಿದೆ. ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.
Advertisement
ಎಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಅದರಂತೆ ಮೇಲಾಧಿಕಾರಿಗಳಿಗೆ ಪತ್ರವನ್ನು ರವಾನೆ ಮಾಡಿದ್ದೇವೆ. ಶೀಘ್ರವೇ ಅಕ್ಕಿ ಬರುವ ಸಾಧ್ಯತೆಯೂ ಇದೆ.– ಮೊಹಮ್ಮದ್ ಇಸಾಕ್ / ಎನ್.ಮಾಣಿಕ್ಯ, ಉಪ ನಿರ್ದೇಶಕರು, ಆಹಾರ ಇಲಾಖೆ ಉಡುಪಿ, ದ.ಕ. ಜಿಲ್ಲೆ