Advertisement
ಶೇಕಮಲೆಯಲ್ಲಿರುವ ದಲಿತ ಕಾಲನಿಗೆ ರಸ್ತೆಯಿಲ್ಲ. ಕಾಲು ದಾರಿಯ ಮೂಲಕ ಅಲ್ಲಿನ ನಿವಾಸಿಗಳು ಮನೆಗೆ ತೆರಳುತ್ತಿದ್ದರು. ಕಾಲು ದಾರಿ ಈ ಬಾರಿಯ ಮಳೆಗೆ ಕುಸಿದು ಬಿದ್ದಿದೆ. ಇಲ್ಲಿ ಸುಮಾರು 20ಕ್ಕೂ ಮಿಕ್ಕಿ ದಲಿತರ ಮನೆಗಳಿವೆ. ಆದರೆ ದಾರಿಯ ವ್ಯವಸ್ಥೆಯಿಲ್ಲ. ಈಗ ಇರುವ ಕಾಲು ದಾರಿಯೂ ಅಪಾಯಕಾರಿಯಾಗಿದೆ. ಸೆ. 15ರಂದು ಕಾಲನಿಯ ನಿವಾಸಿ ಬಿರ್ಕು ಎನ್ನುವ ವೃದ್ಧೆಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಅನಾರೋಗ್ಯ ಪೀಡಿತ ವೃದ್ಧೆಯನ್ನು ಅವರ ಅಳಿಯ ಸುಮಾರು ಅರ್ಧ ಕಿ.ಮೀ. ಹೊತ್ತುಕೊಂಡೇ ರಸ್ತೆ ಬದಿಯವರೆಗೂ ಬಂದು ಅಲ್ಲಿ ವಾಹನ ಏರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ದೃಶ್ಯ ಅಲ್ಲಿನ ದಾರಿಯ ಸಮಸ್ಯೆಯನ್ನು ಸಾರಿ ಹೇಳುತ್ತಿರುವಂತಿತ್ತು.
ಕಾಲನಿಗೆ ರಸ್ತೆ ನಿರ್ಮಿಸಿ ಎಂದು ಅಲ್ಲಿನ ಜನ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಪ್ರತೀ ಬಾರಿಯೂ ಕಾಲನಿಗೆ ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ. ಆದರೆ ಯರೂ ಇದುವರೆಗೂ ರಸ್ತೆಯ ವಿಚಾರದಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ. ಇರುವ ಏಕೈಕ ಕಾಲು ದಾರಿ ಮಳೆಗೆ ಕುಸಿದಿದ್ದು, ಅದನ್ನು ತಾತ್ಕಾಲಿಕವಾಗಿ ಅಡಿಕೆ ಮರದ ತುಂಡಿನಿಂದ ದುರಸ್ತಿ ಮಾಡಲಾಗಿದೆ. ಕಾಲನಿಯ ಶಾಲಾ ಮಕ್ಕಳು ಹೊಳೆಯ ಬದಿಯಲ್ಲಿರುವ ಕಾಲು ದಾರಿಯ ಮೂಲಕ ಅಪಾಯಕಾರಿ ನಡಿಗೆಯೊಂದಿಗೆ ಶಾಲೆಗೆ ತೆರಳುತ್ತಿದ್ದಾರೆ. ಕಾಲನಿಗೆ ರಸ್ತೆ ಇಲ್ಲದೆ ನಾವು ತುಂಬಾ ಕಷ್ಟದಲ್ಲಿದ್ದೇವೆ ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಬಿರ್ಕು ಅವರ ಅಳಿಯ ಸೇಸಪ್ಪ ಮನವಿ ಮಾಡಿದ್ದಾರೆ.