Advertisement

ಬಾರದ ಮಳೆ: ಜಾನುವಾರಿಗಿಲ್ಲ ಮೇವು

06:55 AM Feb 08, 2019 | |

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗೆ ತಕ್ಕಂತೆ ಮಳೆ ಆಗದೇ ಇರುವುದರಿಂದ ರೈತರು ಬೆಳೆದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಹಾನಿಯಾಗಿವೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೇ ಭೂಮಿಯಲ್ಲಿಯೇ ಕಮರಿಹೋಗಿವೆ. ಹೀಗಾಗಿ ಮೇವು ಮತ್ತು ನೀರಿಲ್ಲದ ಕಾರಣ ಹಿಂದುಳಿದ ಪ್ರದೇಶದ ತಾಲೂಕು ಈಗ ಬರ ಛಾಯೆ ಎದುರಿಸುವಂತಾಗಿದೆ.

Advertisement

ತಾಲೂಕಿನ ಕರಿಕಲ್ಲಿನ ಪ್ರದೇಶ ಎಂದು ಮತ್ತು ಪ್ರತಿ ವರ್ಷ ನೀರು ಹಾಗೂ ಮೇವಿನ ಸಮಸ್ಯೆ ಎದುರಿಸುತ್ತಿರುವ ಮೋಘಾ, ರುಮ್ಮನಗೂಡ, ಸಾಸರಗಾಂವ, ರಾಣಾಪೂರ, ಗಡಿಲಿಂಗದಳ್ಳಿ, ಕೊಟಗಾ, ಚೆಂಗಟಾ, ಚಂದನಕೇರಾ, ಪಸ್ತಪುರ, ವಜೀರಗಾಂವ, ಗಂಜಗಿರಿ, ತಾಡಪಳ್ಳಿ, ಹೂವಿನಬಾವಿ, ರುಸ್ತಂಪುರ, ಸೇರಿ ಬಡಾ ತಾಂಡಾ, ಸೇರಿ ಸಣ್ಣ ತಾಂಡಾಗಳಲ್ಲಿ ಮಳೆ ಇಲ್ಲದ ಕಾರಣ ಹಳ್ಳಕೊಳ್ಳಗಳಲ್ಲಿ ನೀರಿಲ್ಲದೇ ಬಣಗುಡುತ್ತಿವೆ. ಹೀಗಾಗಿ ದನಕರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಹೊಲದಲ್ಲಿ ಬೆಳೆದಿರುವ ಬೆಳೆಗಳಾದ ತೊಗರಿ, ಜೋಳ, ಕಡಲೇ ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇದರಿಂದಾಗಿ ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಗಳು ಬಿಸಿಲಿನ ತಾಪ ಮತ್ತು ಮಣ್ಣಿನಲ್ಲಿ ತೇವಾಂಶ ಇಲ್ಲದ ಕಾರಣ ತೊಗರಿ ಹೂವುಗಳು ಉದುರಿ ಹೋಗಿವೆ. ಜೋಳ ಬೆಳವಣಿಗೆ ಹಂತದಲ್ಲಿಯೇ ಮುಟುರಿ ಹೋಗಿದೆ. ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿದ ರೈತರು ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುವಂತಾಗಿದೆ. ತಾಲೂಕಿನ ಚಿಂದಾನೂರ, ಚಿಕ್ಕನಿಂಗದಳ್ಳಿ, ಚಿಂಚೋಳಿ, ಗಂಜಗಿರಿ, ಹೊಡೆಬೀರನಳ್ಳಿ ಗ್ರಾಮಗಳಲ್ಲಿ ರೈತರು ಸಾಲ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.
 
ಗೊಣಗಿ, ಧುತ್ತರಗಾ, ಮುಕರಂಬಾ, ಕಂಚನಾಳ, ಹುಲಸಗೂಡ, ರಟಕಲ್‌ ಗ್ರಾಮಗಳಲ್ಲಿ ಬರದ ಛಾಯೆ ಕಂಡು ಬರುತ್ತಿದೆ .ಅಡವಿಯಲ್ಲಿ ಮೇವು ಇಲ್ಲದ ಕಾರಣ ಚಿಮ್ಮಾಇದಲಾಯಿ, ದಸ್ತಾಪುರ, ಇಂದ್ರಪಾಡ ಹೊಸಳ್ಳಿ ಗ್ರಾಮದ ದನಕರುಗಳನ್ನು ಚಿಂಚೋಳಿ ಪಟ್ಟಣದ ಹತ್ತಿರ ಹರಿಯುವ ಮುಲ್ಲಾಮಾರಿ ನದಿಗೆ ಕರೆ ತಂದು ನೀರು ಕುಡಿಸಿಕೊಂಡು ಹೋಗುತ್ತಿದ್ದಾರೆ. ತಾಲೂಕಿನಲ್ಲಿ ಒಂದು ಮಳೆ ಇಲ್ಲದಿದ್ದರು ಸಹ ಕೆಳದಂಡೆ ಮುಲ್ಲಾಮಾರಿ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಮುಖ್ಯ ಕಾಲುವೆಗೆ ಹರಿದು ಬಿಟ್ಟ ನೀರು ಉಪಯೋಗಿಸಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರು ಈ ವರ್ಷ ಭಾರಿ ನಿರಾಶೆ ಪಡಬೇಕಾಗಿದೆ. ಏಕೆಂದರೆ ಕೆಳದಂಡೆ ಮುಲ್ಲಾಮಾರಿ ಬಲದಂಡೆ ಮುಖ್ಯಕಾಲುವೆ 80 ಕಿಮೀ ಅಧುನೀಕರಣ ಕಾಮಗಾರಿ ನಡೆಯುತ್ತಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದರು ಸಹ ಕಾಲುವೆಗಳಿಗೆ ಬಿಡುವಂತಿಲ್ಲ.

ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಇದೆ. ಆದರು ಸಹ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ನೀರಿನ ತೊಟ್ಟಿ ಇಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. 

ತಾಲೂಕನ್ನು ಸರಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದರು ಸಹ ಇಲ್ಲಿ ಯಾವುದೇ ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸಗಳು ನಡೆಯುತ್ತಿಲ್ಲ. ತಾಲೂಕಿನಲ್ಲಿ ಜನರು ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಯಾವುದೇ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಾಡು ಪ್ರಾಣಿಗಳ ಸಂಕಟ ಕೇಳುವರಿಲ್ಲ ಗಡಿಭಾಗದ ಕುಂಚಾವರಂ ವನ್ಯಜೀವಿ ಪ್ರದೇಶದಲ್ಲಿ ಈ ವರ್ಷ ಹೆಚ್ಚು ಮಳೆ
ಆಗದಿರುವ ಕಾರಣ ಅರಣ್ಯದಲ್ಲಿ ನದಿ ಹಳ್ಳ ಕೊಳ್ಳದಲ್ಲಿ ನೀರಿನ ಕೊರತೆಯಿಂದಾಗಿ ಕಾಡುಪ್ರಾಣಿಗಳು ಸಂಕಟಪಡುವಂತಾಗಿದೆ. ಕುಂಚಾವರಂ, ವೆಂಕಟಾಪುರ, ಶಾದೀಪುರ ಗ್ರಾಪಂ ವ್ಯಾಪ್ತಿಯಲ್ಲಿ 17 ಗ್ರಾಮ ಮತ್ತು ತಾಂಡಾಗಳಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಾಗಾಗಿ ಕೊಳವೆಬಾವಿಗಳಲ್ಲಿ ನೀರಿಲ್ಲದ ಕಾರಣ ಬೆಳೆಗಳಿಗೆ ಹಾಯಿಸಲು ಆಗುತ್ತಿಲ್ಲ. ಇದರಿಂದಾಗಿ ಕಬ್ಬು, ಅರಶಿಣ,
ಉಳ್ಳಾಗಡಿ ಮತ್ತು ಹಣ್ಣಿನ ಗಿಡಗಳಿಗೆ ನೀರಿಲ್ಲದೆ ಒಣಗಿ ಹೋಗುತ್ತಿವೆ. ಇದರಿಂದ ರೈತರು ಆತಂಕ ಪಡುವಂತಾಗಿದೆ. ಶಿವರೆಡ್ಡಿಪಳ್ಳಿ, ಶಿವರಾಮಪುರ, ಲಚಮಾಸಾಗರ, ಪೋಚಾವರಂ, ಜಿಲವರ್ಷ ರೈತರು ನೀರಿನ ಸಮಸ್ಯೆಯಿಂದಾಗಿ ಬೆಳೆ ಕಟಾವು ಮಾಡದೇ ಹಾಗೆ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next