Advertisement

ನಂ. 4 ಸ್ಥಾನದ ಚರ್ಚೆಗೆ ರಾಹುಲ್ ಉತ್ತರ

02:21 AM May 30, 2019 | Team Udayavani |

ಕಾರ್ಡಿಫ್: ಏಕದಿನ ವಿಶ್ವಕಪ್‌ ಆರಂಭವಾಗುವ ಕ್ಷಣದಲ್ಲಿಯೇ ಕರ್ನಾಟಕದ ಭರವಸೆಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಆಟವಾಡಿ ನಂ. 4ನೇ ಸ್ಥಾನದ ಚರ್ಚೆಗೆ ಉತ್ತರ ನೀಡಿದ್ದಾರೆ.

Advertisement

ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ ಆಡಿದ್ದರಲ್ಲದೇ ಭರ್ಜರಿ ಶತಕ ಸಿಡಿಸಿ ಫಾರ್ಮ್ನಲ್ಲಿರುವುದನ್ನು ಸಾಬೀತುಪಡಿಸಿದರು. ಈ ಮೂಲಕ ನಂ. 4 ಸ್ಥಾನದ ಬರವನ್ನು ನೀಗಿಸುವ ಸೂಚನೆ ನೀಡಿದ್ದಾರೆ.

ಭಾರತೀಯ ತಂಡದ ನಂ. 4ನೇ ಸ್ಥಾನಕ್ಕಾಗಿ ಸೂಕ್ತ ಆಟಗಾರನ ಹುಡುಕಾಟದಲ್ಲಿತ್ತು. ಶತಕ ಸಿಡಿಸಿದ ರಾಹುಲ್ ವಿಶ್ವಕಪ್‌ ಆಟವಾಡುವ ಬಳಗದಲ್ಲಿ ತನ್ನ ಸ್ಥಾನ ಭದ್ರಪಡಿಸಿದರಲ್ಲದೇ ನಂ. 4 ಸ್ಥಾನಕ್ಕೂ ‘ಸೈ’ ಎನಿಸಿಕೊಂಡಿದ್ದಾರೆ.

ದ್ರಾವಿಡ್‌ ಮಾರ್ಗದರ್ಶನ
ಚಾಟ್ ಶೋ ವಿವಾದದಿಂದಾಗಿ ಕ್ರಿಕೆಟ್ನಿಂದ ದೂರ ಉಳಿದ ವೇಳೆ ಕೆಲ ಸಮಯ ಸ್ನೇಹಿತರು ಮತ್ತು ಕುಟುಂಬದ ಜತೆ ಕಾಲ ಕಳೆದ ರಾಹುಲ್ ಫಾರ್ಮ್ ವೈಫ‌ಲ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರು. ಆಟಕ್ಕೆ ಮರಳುವ ಬಗ್ಗೆ ಗಮನ ಹರಿಸುವತ್ತ ಚಿಂತನೆ ನಡೆಸಿದರು. ಇದಕ್ಕಾಗಿ ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್‌ ಅವರ ಮಾರ್ಗದರ್ಶನ ಪಡೆದರು.

ಬ್ಯಾಟಿಂಗ್‌, ತಂತ್ರಗಾರಿಕೆ, ಮಾನಸಿಕ ಸಿದ್ಧತೆ, ಕಳಪೆ ಫಾರ್ಮ್ ಮತ್ತು ಆತ್ಮವಿಶ್ವಾಸ ಕುಗ್ಗಿದ ವೇಳೆ ಯಾವ ರೀತಿ ಸ್ಪಂದಿಸಬೇಕು ಎಂಬ ವಿಚಾರದಲ್ಲಿ ದ್ರಾವಿಡ್‌ ಸೂಕ್ತ ಸಲಹೆ ಸೂಚನೆ ನೀಡಿದರು. ಭಾರತ ‘ಎ’ ಪರ ಆಡಿದ ಪಂದ್ಯಗಳಿಂದ ಸಾಕಷ್ಟು ಅನುಭವ ನನಗಾಯಿತು. ಇದರಿಂದ ತಂಡಕ್ಕೆ ಮರಳುವ ಹಸಿವು ಹೆಚ್ಚಾಯಿತು. ಇದೇ ಶ್ರೇಷ್ಠ ನಿರ್ವಹಣೆ ನೀಡಲು ಪ್ರೇರಣೆಯಾಯಿತು ಎಂದು ರಾಹುಲ್ ತಿಳಿಸಿದರು.

Advertisement

ನಂ. 4 ಸ್ಥಾನಕ್ಕೆ ರೆಡಿ
ಹೆಚ್ಚಿನ ಸಂದರ್ಭ ಇನ್ನಿಂಗ್ಸ್‌ ಆರಂಭಿಸಿದ್ದ ರಾಹುಲ್ ಇದೀಗ ನಂ. 4 ಸ್ಥಾನದಲ್ಲೂ ಆಡಲು ಸಿದ್ಧರಾಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದರಿಂದ ಅವರಲ್ಲಿ ಹೊಸ ಉತ್ಸಾಹ ತುಂಬಿದೆ. ಇಷ್ಟಲ್ಲದೇ ಐಪಿಎಲ್ನಲ್ಲಿ ಆಡಿರುವುದು ಅವರ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗಿದೆ. ‘ನಾಲ್ಕನೇ ಕ್ರಮಾಂಕದಲ್ಲಿ ಆಡುವ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ಒತ್ತಡ ಮತ್ತು ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಬೇಕೆಂದು ತಿಳಿದಿರಬೇಕು. ಇದೊಂದು ತಂಡ ಗೇಮ್‌ ಆಗಿರುವ ಕಾರಣ ಪ್ರತಿಯೊಬ್ಬರ ಕೊಡುಗೆ ಪ್ರಾಮುಖ್ಯ ಪಡೆಯುತ್ತದೆ. ಹಾಗಾಗಿ ನಾವೆಲ್ಲ ಒತ್ತಡವನ್ನು ಯಾವ ರೀತಿ ನಿಭಾಯಿಸುವ ಕುರಿತು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ರಾಹುಲ್ ತಿಳಿಸಿದರು. ‘ಅಭ್ಯಾಸ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿದ್ದರಿಂದ ನಮಗೆ ದೊಡ್ಡ ಜತೆಯಾಟ ಅಗತ್ಯವಾಗಿ ಬೇಕಿತ್ತು. ಇಬ್ಬರಲ್ಲಿಯೂ ವೈಯಕ್ತಿಕ ಯೋಜನೆ ಇದ್ದ ಕಾರಣ ಕ್ರೀಸ್‌ ಮಧ್ಯದಲ್ಲಿ ನಾವು (ನಾನು ಮತ್ತು ಧೋನಿ) ಅದರಂತೆ ಆಡಲು ಬಯಸಿದ್ದೆವು. ಧೋನಿ ಜತೆ ಬ್ಯಾಟಿಂಗ್‌ ಮಾಡುವುದು ನನ್ನ ಕನಸಾಗಿತ್ತು’ ಎಂದು ರಾಹುಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next