ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಮೂಲ ನಿಯಮ ಪಾಲನೆಯನ್ನೇ ನಾವು ಮರೆತಿದ್ದೇವೆ! ಇದೇ ಸೋಂಕು ಮತ್ತೆ ವ್ಯಾಪಕವಾಗುತ್ತಿರುವುದಕ್ಕೆ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ಪ್ರಬಲವಾಗಿ ವ್ಯಕ್ತವಾಗಿದೆ.
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಅಥವಾ ನೈಟ್‌ಕರ್ಫ್ಯೂ ಜಾರಿಯಾದರೆ ಕರ್ನಾಟಕದಲ್ಲೂ ಅದರ ಕೂಗು ಕೇಳಿ ಬರುತ್ತದೆ. ಆದರೆ, ಸೋಂಕು ಹೆಚ್ಚಿರುವ ಪ್ರದೇಶದಿಂದ ಬಂದವರಿಗೆ `ಹೋಂ ಕ್ವಾರಂಟೈನ್’ ಮಾಡುವ ಕನಿಷ್ಠ ನಿಯಮ ಪಾಲನೆಯೂ ನಮ್ಮ ರಾಜ್ಯದಲ್ಲಿ ಆಗುತ್ತಿಲ್ಲ.
ಸದ್ಯ ವಿದೇಶಿ ಪ್ರಯಾಣಿಕರನ್ನು ಸೇರಿದಂತೆ (ಇಂಗ್ಲೆಂಡ್ ಹೊರಡುಪಡಿಸಿ) ಯಾರಿಗೂ ಕಡ್ಡಾಯ ಹೋಂ ಕ್ವಾರಂಟೈನ್ ನಿಯಮ ಜಾರಿಯಲ್ಲಿಲ್ಲ. ಇದರ ಪರಿಣಾಮ ನೆಗೆಟಿವ್ ವರದಿ ಹಿಡಿದು ರಾಜ್ಯ ಪ್ರವೇಶಿಸುವವರಲ್ಲಿ ಅಥವಾ ಅವರ ಸಂಪರ್ಕಿತರಲ್ಲಿಯೇ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳೇ ಸದ್ಯ ಸೋಂಕು ಹೆಚ್ಚಳಕ್ಕೆ ಅಂದರೆ, ಎರಡನೇ ಅಲೆಗೆ ಪ್ರಮುಖ ಕಾರಣವಾಗುತ್ತಿವೆ.
ಇದನ್ನೂ ಓದಿ:ಕೋವಿಡ್ : ಮುಂಜಾಗ್ರತೆಯೇ ಬಲುದೊಡ್ಡ ಲಸಿಕೆ
ಪ್ರಮುಖವಾಗಿ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕಲಬುರಗಿಯಲ್ಲಿ ಹೊರರಾಜ್ಯದಿಂದ ಬಂದವರಲ್ಲಿಯೇ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿದೆ. ಕೇರಳದಿಂದ ಬಂದ ಬೆಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೋಂಕು, ಮಂಗಳೂರು ಹಾಗೂ ಉಡುಪಿಯ ಕಾಲೇಜು, ಹಾಸ್ಟೆಲ್‌ಗಳ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿರುವುದು, ಬೀದರ್, ಕಲಬುರಗಿ ಮರುವಲಸೆ ಕಾರ್ಮಿಕರಲ್ಲಿ ನೆಗೆಟಿವ್ ವರದಿ ಇದ್ದರು ಮತ್ತೆ ಸೋಂಕು ದೃಢಪಟ್ಟಿರುವುದು ನೈಜ ಉದಾಹರಣೆಯಾಗಿವೆ.
ಮೊದಲ ಅಲೆಯಲ್ಲಿ ಹೀಗಿತ್ತು!
ಹೊರರಾಜ್ಯ ಮತ್ತು ಹೊರದೇಶವೇ ಸೋಂಕಿನ ಮೂಲವಾಗಿದ್ದರಿಂದ ಕಳೆದ ವರ್ಷ ಈ ಸಂದರ್ಭದಲ್ಲಿ ಅಲ್ಲಿಂದ ಬಂದವರಿಗೆ ಕಡ್ಡಾಯ 7 ದಿನ ಸಾಂಸ್ಥಿಕ ಕ್ವಾರಂಟೈನ್ ಬಳಿಕ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್ ಜಾರಿ ಇತ್ತು, ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಲಾಗುತ್ತಿತ್ತು. ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಹೆಚ್ಚು ಜನ ಓಡಾಟ ನಡೆಸುತ್ತಾರೆ ಸಾಂಸ್ಥಿಕ ಕ್ವಾರಂಟೈನ್ ಮಾಡಿ ನಿರ್ವಹಣೆ ಕಷ್ಟ ಎಂದು ಏಳು ದಿನಗಳ ಹೋಂ ಕ್ವಾರಂಟೈನ್ ಜಾರಿಗೊಳಿಸಲಾಗಿತ್ತು. ಕ್ವಾರಂಟೈನ್ ಸೀಲ್ ಹಾಕಿ, ನಿಗಾವಹಿಸಲಾಗುತ್ತಿತ್ತು. ಬಳಿಕ ಸೋಂಕು ಹತೋಟಿ ಹಿನ್ನೆಲೆ ಎಲ್ಲ ವಿನಾಯ್ತಿ ನೀಡಲಾಗಿತ್ತು.
ಕ್ವಾರಂಟೈನ್ ಏಕೆ ಅವಶ್ಯಕ?
ಕೊರೊನಾ ಒಂದು ಅಂಟು ರೋಗ. ಪ್ರತ್ಯೇಕ ಸ್ಥಳದಲ್ಲಿದ್ದು, ಆತಂಕ ಕಾಪಾಡುವುದರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಸೋಂಕು ಹೆಚ್ಚಿರುವ ಪ್ರದೇಶದಿಂದ ಬಂದವರಿಗೆ ಪ್ರಯಾಣ ಸಂದರ್ಭದಲ್ಲಿ, ಪರೀಕ್ಷೆ ನಂತರ ಸೋಂಕು ತಗುಲಿ ಏಳು ದಿನಗಳ ನಂತರವೂ ರೋಗ ಲಕ್ಷಣ ಕಾಣಿಸಿಕೊಳ್ಳಬಹುದು. ಜತೆಗಿದ್ದವರಿಗೂ ಹರಡಬಹುದು. ಹೀಗಾಗಿ, ಕುಟುಂಬಸ್ಥರು, ನೆರೆಯವರ ಆರೋಗ್ಯ ದೃಷ್ಠಿಯಿಂದ ಸೋಂಕು ಹೆಚ್ಚಿರುವ ಜಿಲ್ಲೆಗಳಿಂದ ಬರುವವರು ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್ ಆಗಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.
ಕ್ವಾರಂಟೈನ್ ಜಾರಿ ಕೂಡಾ ಸುಲಭವಲ್ಲ
ನಿತ್ಯ ಲಕ್ಷಾಂತರ ಮಂದಿ ಮಹಾರಾಷ್ಟ್ರ, ಕೇರಳದಿಂದ ರಾಜ್ಯಕ್ಕೆ ಆಗಮಿಸುತ್ತಾರೆ. ಲಾಕ್‌ಡೌನ್ ಇಲ್ಲದ ಸಂದರ್ಭದಲ್ಲಿ ಅವರೆಲ್ಲರನ್ನು ಕ್ವಾರಂಟೈನ್‌ನಲ್ಲಿರಿಸಿ ನಿಗಾವಹಿಸುವುದು ಕಷ್ಟ ಸಾಧ್ಯ. ಸಾಂಸ್ಥಿಕ ಕ್ವಾರಂಟೈನ್‌ಗೆ ಹೆಚ್ಚು ಹಣ ಬೇಕಾಗುತ್ತದೆ. ಇದರ ಬದಲು ಗಡಿಯಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡಬೇಕು. ಪ್ರಯಾಣಿಕರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳುವ, ಲಕ್ಷಣ ಇದ್ದರೆ ಕ್ವಾರಂಟೈನ್ ಆಗುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಹಿಸಬೇಕು ಎನ್ನುತ್ತಾರೆ ಡಾ.ಬಲ್ಲಾಳ್.
ತಮಿಳುನಾಡಿನಲ್ಲಿ ಸಾಧ್ಯ ನಮ್ಮಲ್ಲಿ ಯಾಕಿಲ್ಲ?
ನೆರೆಯ ರಾಜ್ಯಗಳಲ್ಲಿ ಎರಡನೇ ಅಲೆ ಭೀತಿ ಹಿನ್ನೆಲೆ ಫೆಬ್ರವರಿ ಕೊನೆಯ ವಾರವೇ ತಮಿಳುನಾಡು ಸರ್ಕಾರವು ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಪ್ರಯಾಣಿಕರಿಗೆ ಏಳು ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ನಿಯಮ ಜಾರಿ ಚಿಂತನೆಯನ್ನು ನಡೆಸಿಲ್ಲ.
ಇದನ್ನೂ ಓದಿ: ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ತಪಾಸಣೆ ಕಡ್ಡಾಯ: ವೆಂಕಟೇಶ್ ನಾಯ್ಕ
ಸೋಂಕು ಹೆಚ್ಚಿರುವ ಜಿಲ್ಲೆಗಳು – ಕಾರಣ/ ಆತಂಕ
ಬೆಂಗಳೂರು: ಮಹಾರಾಷ್ಟ್ರ ಕೇರಳ ವಲಸೆ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು. ಹೊರರಾಜ್ಯ, ಹೊರದೇಶ ಪ್ರಯಾಣಿಕ ದಟ್ಟಣೆ.
ಬೀದರ್ ಹಾಗೂ ಕಲಬುರಗಿ: ಮಹಾರಾಷ್ಟ್ರ ವಲಸೆ ಕಾರ್ಮಿಕರು.
ದಕ್ಷಿಣ ಕನ್ನಡ ಮತ್ತು ಉಡುಪಿ: ಕೇರಳದಿಂದ ಬರುವ ವಿದ್ಯಾರ್ಥಿಗಳು, ಲಾಕ್‌ಡೌನ್ ಭೀತಿಯಿಂದ ಬರುತ್ತಿರುವ ಮರುವಲಸೆ ಕಾರ್ಮಿಕರು.
ತುಮಕೂರು ಮತ್ತು ಮೈಸೂರು: ಬೆಂಗಳೂರು ಮತ್ತು ಕೇರಳ ಪ್ರಯಾಣಿಕರು. ಪ್ರವಾಸಿಗರು.
ಬಿಗಿ ಇಲ್ಲದ ಬೀದರ್ ಚೆಕ್‌ಪೋಸ್ಟ್
ಬೀದರ್‌ನಿಂದ 10 ಕಿ.ಮೀ ದೂರದಲ್ಲಿ ಮಹಾರಾಷ್ಟ್ರ ಗಡಿ ಇದೆ. ಹೀಗಾಗಿ, ಸಾಕಷ್ಟು ಮಂದಿ ವ್ಯವಹಾರಿಕ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಓಡಾಟ ನಡೆಸುತ್ತಾರೆ. ಗಡಿಯಲ್ಲಿ ಒಬ್ಬರು ಅಥವಾ ಇಬ್ಬರು ಪೊಲೀಸ್ ಇರಲಿದ್ದು, ಕಠಿಣವಾಗಿ ತಪಾಸಣೆಯಾಗುತ್ತಿಲ್ಲ. ಜತೆಗೆ ಹಲವು ಮಂದಿ ಮಹಾರಾಷ್ಟ್ರ ಕೆಲವೆಡೆ 100 ರೂ.ಗೆ ಸಿಗುವ ನಕಲಿ ಪರೀಕ್ಷಾ ವರದಿ ತೋರಿಸಿ ಗಡಿದಾಟುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್ ಎರಡನೇ ಅಲೆ ಎದುರಿಸಲು ಸನ್ನದ್ಧರಾಗಿ: ಪಂಡಿತಾರಾಧ್ಯ ಸ್ವಾಮೀಜಿ
ಕರಾವಳಿಯನ್ನು ಈ ಬಾರಿಯೂ ಕಾಡಲಿದೆ ಮುಂಬೈ
ಕಳೆದ ವರ್ಷ ಮಹಾರಾಷ್ಟ್ರದಿಂದ ಹಿಂದಿರುಗಿದ ವಲಸೆ ಕಾರ್ಮಿಕರಿಂದ (ಹೋಟೆಲ್ ಕಾರ್ಮಿಕರು) ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸೋಂಕು ಹೆಚ್ಚಾಗಿತ್ತು. ಈ ಬಾರಿಯು ಇದೇ ಕಾರಣದಿಂದ ಸೋಂಕು ಹೆಚ್ಚಾಗುತ್ತಿದೆ. ಅಲ್ಲದೆ, ಕರಾವಳಿ ಭಾಗಕ್ಕೆ ಕೇರಳ ಮತ್ತು ಮಹಾರಾಷ್ಟ್ರ ಎರಡರ ಆತಂಕವು ಹೆಚ್ಚಿದೆ.
ಸದ್ಯ ಕಡಲ ತೀರಗಳಲ್ಲಿ ಮುಂಬೈನಿಂದ ಸೋಂಕು ಪರೀಕ್ಷಾ ವರದಿ ಇಲ್ಲದೆ ನೇರವಾಗಿ ಬಂದ ಅನೇಕರು ಪರೀಕ್ಷೆಗೆ ಮಾದರಿ ನೀಡಿ ಮನೆ ಸೇರಿಕೊಳ್ಳುತ್ತಿದ್ದಾರೆ. ಮೂರು ದಿನಗಳ ನಂತರ ವರದಿ ಬರುವವರೆಗೂ ಕ್ವಾರಂಟೈನ್ ಕೂಡಾ ಮಾಡಲಾಗುತ್ತಿಲ್ಲ.
ಸೋಂಕು ಪ್ರಾಥಮಿಕ ಹಂತದಲ್ಲಿ ಇದ್ದರೆ ನೆಗೆಟಿವ್ ವರದಿ ಬರುತ್ತದೆ. ಹೀಗಾಗಿ, ಮಹಾರಾಷ್ಟ್ರ ಅಥವಾ ಕೇರಳ ಬಂದವರನ್ನು ಸುರಕ್ಷಾ ದೃಷ್ಠಿಯಿಂದ ಒಂದು ವಾರ ಹೋಂ ಕ್ವಾರಂಟೈನ್ ಮಾಡುವುದು ಉತ್ತಮ. –
ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ. (ಸರ್ಕಾರ ಸಲಹಾ ಸಮಿತಿ ಸದಸ್ಯರು)
ಜಯಪ್ರಕಾಶ್ ಬಿರಾದಾರ್