Advertisement

PSI ಮರುಪರೀಕ್ಷೆ ಬೇಡ: ಪ್ರಾಮಾಣಿಕ ಅಭ್ಯರ್ಥಿಗಳ ಆಗ್ರಹ

09:29 PM Aug 12, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ 2021ರ ಅಕ್ಟೋಬರ್‌ನಲ್ಲಿ ನಡೆದಿದ್ದ ಪಿಎಸ್‌ಐ ಪರೀಕ್ಷೆಯಲ್ಲಿ 53 ಅಭ್ಯರ್ಥಿಗಳು ಅಕ್ರಮ ಎಸಗಿದ್ದ ಪರಿಣಾಮ, ಉಳಿದ 492 ಅಭ್ಯರ್ಥಿಗಳ ಪ್ರಾಮಾಣಿಕ ಪರಿಶ್ರಮಕ್ಕೆ ಬೆಲೆ ಕೊಡದೆ, ಮರುಪರೀಕ್ಷೆಗೆ ಹೊರಡಿಸಿರುವ ಆದೇಶ ನ್ಯಾಯಯುತವಲ್ಲ ಎಂದು ಆಯ್ಕೆಯಾಗಿದ್ದ ಪಿಎಸ್‌ಐ ಅಭ್ಯರ್ಥಿಗಳು ಹೇಳಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿ ವೆಂಕಟೇಶ್‌, ಪರೀಕ್ಷೆಯಲ್ಲಿ ಅಕ್ರಮವೆಸಗಿದ 53 ಅಭ್ಯರ್ಥಿಗಳನ್ನು ಪೊಲೀಸ್‌ ಇಲಾಖೆಯ ಯಾವುದೇ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ. ಹಾಗಿದ್ದರೂ ಉಳಿದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ಆದೇಶ ಹೊರಡಿಸಿರುವುದು ಸರಿಯಲ್ಲ, ಅದನ್ನು ಹಿಂದೆಗೆದುಕೊಂಡು, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂದು ಆಗ್ರಹಿಸಿದರು.

Advertisement

ಮತ್ತೂಬ್ಬ ಅಭ್ಯರ್ಥಿ ಚಂದನ್‌ ಮಾತನಾಡಿ, ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸರಕಾರ ಸೂಚಿಸುವಂತಹ ಯಾವುದೇ ತನಿಖೆಯನ್ನು ಎದುರಿಸಲು 490ಕ್ಕೂ ಹೆಚ್ಚು ಅಭ್ಯರ್ಥಿಗಳು ಸಿದ್ಧರಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ್‌ ನಾಯಕ್‌, ರಚನಾ ಸಹಿತ ಹಲವು ಅಭ್ಯರ್ಥಿಗಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next