Advertisement

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

06:15 PM Oct 22, 2021 | Team Udayavani |

ಬೆಂಗಳೂರು: ಕೋವಿಡ್‌ ನಿಯಂತ್ರಿಸಲು 3ನೇ ಡೋಸ್‌ ಲಸಿಕೆ ಕೊಡುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಐಟಿ, ಬಿಟಿ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿದರು.

Advertisement

ಮಲ್ಲೇಶ್ವರದ ಕಬಡ್ಡಿ ಮೈದಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 83ಜನರಿಗೆ (4.15 ಕೋಟಿ ಜನರು) ಕೋವಿಡ್‌ ಮೊದಲನೇ ಲಸಿಕೆ ಕೊಡಲಾಗಿದೆ. 2.05 ಕೋಟಿ ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ.

ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಜನಜೀವನ ಎಂದಿನಂತೆ ನಡೆಯಲು ಆರೋಗ್ಯ ಸಚಿವರು ಮತ್ತು ಸಚಿವ ಸಂಪುಟ ಶ್ರಮಿಸಿದೆ. ಆರ್ಥಿಕ ವಹಿವಾಟು ಕೋವಿಡ್‌ ಪೂರ್ವ ಅವಧಿಗಿಂತ ಹೆಚ್ಚು ಉತ್ತಮವಾಗುವ ಹಂತ ತಲುಪಿದೆ. ಲಸಿಕೆಯಿಂದ ಆಶಾದಾಯಕ ಮತ್ತು ಭರವಸೆದಾಯಕ ಜೀವನ ಸಾಧ್ಯವಾಗಿದೆ. ಲಸಿಕೆ ಮೂರನೇ ಡೋಸ್‌ ಕೊಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದರು.

ಕೋವಿಡ್‌ ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಹಾಗೂ ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಡೋಸ್‌ ಲಸಿಕೆ ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶಗಳಲ್ಲಿ ಶೇ 20ರಷ್ಟು ಲಸಿಕೆ ನೀಡುವ ಸಾಧನೆಯೂ ಆಗಿಲ್ಲ ಎಂದು ವಿಶ್ಲೇಷಿಸಿದರು.

Advertisement

ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಭರವಸೆ ಹೊಂದಿರುವುದರ ಸಂಕೇತ ಇದಾಗಿದೆ. ಆತ್ಮ ನಿರ್ಭರ ಭಾರತ ಪರಿಕಲ್ಪನೆಯಡಿ ನಮ್ಮದೇ ಲಸಿಕೆಯನ್ನು ನಮ್ಮ ಜನರಿಗೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ 90 ಕೋಟಿ ಜನರ ಪೈಕಿ 70 ಕೋಟಿ ಜನರಿಗೆ ಈಗಾಗಲೇ ಮೊದಲನೇ ಲಸಿಕೆ ಕೊಡಲಾಗಿದೆ. ಸುಮಾರು 30 ಕೋಟಿ ಜನರಿಗೆ ಎರಡೂ ಲಸಿಕೆ ಕೊಡಲಾಗಿದೆ. ಇದಕ್ಕಾಗಿ 34,515 ಕೋಟಿ ರೂಪಾಯಿವೆಚ್ಚವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

ದೀನದಲಿತರು, ವಂಚಿತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲ ಜನರಿಗೆ ಯಾವುದೇ ತಾರತಮ್ಯವಿಲ್ಲದೆ ಲಸಿಕೆ ಕೊಡಲಾಗಿದೆ. ಈ ಮೂಲಕ ಸಮಾನತೆಯ ಸಂದೇಶ ಕೊಟ್ಟಿದ್ದೇವೆ. ವೈದ್ಯರು, ನರ್ಸ್‌ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈಗ ಲಸಿಕೆಯನ್ನು ವಿಶ್ವದ ಇತರ ದೇಶಗಳಿಗೂ ಸರಬರಾಜು ಮಾಡಲಾಗುತ್ತಿದೆ ಎಂದರು.

ಇತರ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಕನಿಷ್ಠ ಸೋಂಕಿತರು, ಅತ್ಯಂತ ಕಡಿಮೆ ಸಾವಿನ ಪ್ರಮಾಣ ನಮ್ಮ ದೇಶದ್ದಾಗಿತ್ತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಋಣಾತ್ಮಕ ಹೇಳಿಕೆ ನೀಡುವ ಮೂಲಕ ಏನು ತಿಳಿಸಲು ಹೊರಟಿದ್ದಾರೆ ಎಂದು ತಿಳಿಯುತ್ತಿಲ್ಲ. ಲಸಿಕೆ ಸಾಧನೆ ಬಗ್ಗೆ ವಿದೇಶಗಳ ನಾಯಕರೇ ಹೊಗಳುತ್ತಿದ್ದಾರೆ. 100 ಕೋಟಿ ಲಸಿಕೆ ನೀಡಿದ್ದು ಅಸಾಧಾರಣ ಸಾಧನೆ. ಅದನ್ನು ನಾವೀಗ ಆಚರಿಸುತ್ತಿದ್ದೇವೆ. ಸಿದ್ದರಾಮಯ್ಯ ಅವರು ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೂವರು ವೈದ್ಯರು ಮತ್ತು ಇಬ್ಬರು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್‌. ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್‌ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್‌. ಆರ್‌. ರಮೇಶ್‌, ಮಾಜಿ ಕಾರ್ಪೋರೇಟರ್‌ ಹೇಮಲತಾ ಸೇಠ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next