Advertisement

ಮಕ್ಕಳಿಗಿಲ್ಲ ತರಹೇವಾರಿ ಬಿಸಿಯೂಟ

11:13 AM Dec 25, 2019 | Suhan S |

ತೇರದಾಳ: ಸರಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಹೊಸ ಮೆನು ಆದೇಶ ನೀಡಿದ್ದರೂ ಹಳೆ ಮೆನು ಪ್ರಕಾರ ಊಟ ನೀಡಲಾಗುತ್ತಿದೆ. ಅಕ್ಷರ ದಾಸೋಹ ಯೋಜನೆಯಡಿ ಅನ್ನ, ಸಾಂಬಾರ ಬದಲಾಗಿ ನ. 1ರಿಂದ ವಾರದ ಆರು ದಿನ ವಿವಿಧ ಅಡುಗೆ ಮಾಡಿ ಬಡಿಸುವಂತೆ ಬಾಗಲಕೋಟೆಜಿಪಂ ಅಕ್ಟೋಬರ್‌ 28ರಂದು ಆದೇಶ ಹೊರಡಿಸಿದೆ. ಆದರೆ,ಈವರೆಗೂ ಊಟದ ಹೊಸ ವ್ಯವಸ್ಥೆ ಜಾರಿಗೆ ಬಂದಿಲ್ಲ.

Advertisement

ಇಲಾಖೆಯ ಆದೇಶದ ಪ್ರಕಾರ ಸೋಮವಾರ ಅನ್ನ-ಸೊಪ್ಪು ಮತ್ತು ತರಕಾರಿ, ಮಂಗಳವಾರ ಇಡ್ಲಿ-ಸಾಂಬಾರ ಅಥವಾ ಪೂರಿ ಸಾಗು, ಬುಧವಾರ ಫಲಾವು ಅಥವಾ ಬಿಸಿಬೇಳೆ ಬಾತ್‌, ಗುರುವಾರ ಅನ್ನ, ತರಕಾರಿ ಸಾಂಬಾರ, ಶುಕ್ರವಾರ ಸಿಹಿ ಪೊಂಗಲ್‌, ಶನಿವಾರ ಉಪ್ಪಿಟ್ಟು ಅಥವಾ ಪೂರಿ-ಸಾಗು ಇಲ್ಲವೇ ಸಜ್ಜಕ ಮಾಡಿ ಬಡಿಸಬೇಕು ಎಂದು ಆದೇಶದಲ್ಲಿದೆ

ಜಾರಿಯಾಗುತ್ತಿಲ್ಲವೇಕೆ?: ಆದೇಶದಲ್ಲಿ ಸೂಚಿಸಿದಂತೆ ಅಡುಗೆ ಮಾಡಲು ಬೇಕಾಗುವ ಸಾಮಗ್ರಿಗಳ ಪೂರೈಕೆಯಿಲ್ಲ. ಅಕ್ಕಿ, ಬೇಳೆ, ಅಡುಗೆ ಎಣ್ಣೆ ಹಾಗೂ ಗೋಧಿ ಮಾತ್ರ ಮೊದಲಿನಂತೇ ಬರುತ್ತಿದೆ. ಇಡ್ಲಿ ಮಾಡಲು ಉದ್ದಿನ ಬೇಳೆ ಪೂರಿ ಮಾಡಲು ಮೈದಾ ಹಿಟ್ಟು ಪೂರೈಸಬೇಕು. ಜತೆಗೆ ಇಡ್ಲಿ ಸೆಟ್‌ (ಮನೆ), ಪೂರಿ ಕರಿಯಲು ಕಡಾವಣಗಿ ಬೇಕು. ಇವುಗಳನ್ನು ಅಡುಗೆ ಸಿಬ್ಬಂದಿ ಎಲ್ಲಿಂದ ತರಬೇಕೆಂಬ ಪ್ರಶ್ನೆಯಿದೆ.

ಎಣ್ಣೆ ಹೆಚ್ಚಿಗೆ ನೀಡುತ್ತಿಲ್ಲ: ಸರಕಾರದ ಸುತ್ತೋಲೆಯಂತೆ 1-5ನೇ ತರಗತಿ ಪ್ರತಿ ಮಗುವಿಗೆ 5, ಹಾಗೂ 6-10ನೇ ತರಗತಿ ಮಗುವಿಗೆ 7.5ಮಿ.ಲೀ. ಎಣ್ಣೆಯನ್ನು ಇಲಾಖೆ ನಿಗದಿಗೊಳಿಸಿದೆ. ಪ್ರತಿ ಮಗುವಿಗೆ 5ಮಿ.ಲೀ. ಅಂದರೆ 100ಮಕ್ಕಳಿಗೆ 500ಮಿ.ಲೀ. ಎಣ್ಣೆ ನೀಡುತ್ತಾರೆ. 500ಮಿ.ಲೀ. ಎಣ್ಣೆಯಲ್ಲಿ ನೂರು ಮಕ್ಕಳಿಗೆ ಪೂರಿ ಕೊಡಲು ಸಾಧ್ಯವೇ ?

ತರಬೇತಿಯಿಲ್ಲ: ಬಿಸಿಯೂಟದ ಸಿಬ್ಬಂದಿಗೆ ಬಿಸಿ ಬೇಳೆ ಬಾತ್‌, ಪೊಂಗಲ್‌ ಮಾಡುವುದು ರೂಢಿಯಿಲ್ಲ. ಹೆಚ್ಚಾಗಿ ಬಡ ಮಹಿಳೆಯರು ಅಡುಗೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಅಂತಹ ಅಡುಗೆ ಮಾಡುವುದಿಲ್ಲ. ಅನೇಕರಿಗೆ ಆ ಅಡುಗೆ ಮಾಡಲು ಬರುವುದಿಲ್ಲ. ಹೀಗಾಗಿ ಹೊಸ ಮೆನು ಪಾಲಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಅನುದಾನ ಹೆಚ್ಚಳ: ತರಕಾರಿ ಸೇರಿದಂತೆ ಸಾಂಬಾರ ಮಾಡಲು ಬೇಕಾಗುವ ವಸ್ತುಗಳನ್ನು ತರಲು ಇಲಾಖೆ 1ರಿಂದ 5ನೇ ತರಗತಿ ಪ್ರತಿ ಮಗುವಿಗೆ ನೀಡುತ್ತಿದ್ದ 1 ರೂಪಾಯಿ 46ಪೈಸೆಯನ್ನು 59 ಪೈಸೆಗೆ ಏರಿಸಿದೆ. ಅದರಂತೆ 6ರಿಂದ 10ನೇ ತರಗತಿ ಪ್ರತಿ ಮಗುವಿಗೆ ನೀಡುತ್ತಿದ್ದ 2ರೂಪಾಯಿ 18ಪೈಸೆಯನ್ನು 38 ಪೈಸೆಯನ್ನಾಗಿ ಡಿಸೆಂಬರ್‌ 1ರಿಂದ ಹೆಚ್ಚಿಸಿದೆ. ಆದರೆ, ಹೆಚ್ಚಿಗೆ ಮಾಡಿರುವ ಪೈಸೆಯಲ್ಲಿ ಹೊಸ ಮೆನು ಕಾರ್ಡ್‌ಗೆ ಬೇಕಾಗುವ ಸಾಮಗ್ರಿ ಖರೀದಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಅಡುಗೆಯವರ ಲೆಕ್ಕಾಚಾರ. ಆದ್ದರಿಂದ ಮೊದಲಿನಂತೆ ಅನ್ನ ಸಾಂಬಾರ, ಮಸಾಲೆ ರೈಸ್‌, ಉಪ್ಪಿಟ್ಟು ಮಾಡುತ್ತಿದ್ದಾರೆ.

ಮಕ್ಕಳ ಬಿಸಿಯೂಟದ ಹೊಸ ಮೆನುವಿನಂತೆ ಶಾಲೆಗಳಲ್ಲಿ ಮಕ್ಕಳು ಊಟ ಮಾಡಬೇಕು. ಅದಕ್ಕಾಗಿ ಇಲಾಖೆ ಸಾದಿಲ್ವಾರ ಹಣ ಹೆಚ್ಚಿಸಿದೆ. ಅಲ್ಲದೆ ಪಾತ್ರೆ-ಪರಿಕರಗಳ ಖರೀದಿ ಮಾಡಲು ಸಂಚಿತ ನಿ ಧಿಯನ್ನು ಬಳಸಲು ಆದೇಶ ನೀಡಲಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಹೊಸ ಮೆನುವಿನಂತೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲು ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ, ಎಸ್‌ಡಿಎಂಸಿ ಹಾಗೂ ಸಮುದಾಯದವರು ನಿಗಾ ವಹಿಸಬೇಕು. ಯಾರೂ ಸಹ ಉದಾಸೀನತೆ ಮಾಡಬಾರದು. ಶಾಲೆಗಳಲ್ಲಿ ಸಾವಯವ ಗೊಬ್ಬರ ತಯಾರಿಕಾ ಘಟಕವನ್ನು ಸಹ ಎಲ್ಲ ಶಾಲೆಯವರು ಮಾಡಬೇಕು.ಎನ್‌.ವೈ. ಕುಂದರಗಿ, ಶಿಕ್ಷಣಾ ಧಿಕಾರಿ ಅಕ್ಷರ ದಾಸೋಹ

 

-ಬಿ.ಟಿ.ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next