Advertisement

ಕಡಲತಡಿಯ ನಿವಾಸಿಗಳಿಗೆ ದೊರೆಯದ ಹಕ್ಕುಪತ್ರ

01:20 AM Dec 19, 2018 | Team Udayavani |

ಕುಂದಾಪುರ: ಕೋಡಿ ಕಡಲತಡಿಯಲ್ಲಿ ಇರುವ 118 ಮೀನುಗಾರ ಕುಟುಂಬಗಳಿಗೆ ಸಿಆರ್‌ಝಡ್‌ ಪ್ರದೇಶ ಎಂದು 94ಸಿಸಿ ಹಕ್ಕುಪತ್ರ ನಿರಾಕರಿಸಲಾಗಿದೆ. ಕಡಲತಡಿಯ ಯೋಧರು ನಾವು ಎಂದು ಕರೆದುಕೊಳ್ಳುವವರು ಮೀನುಗಾರರು. ಮುಂಜಾವದ ಹೊತ್ತು ಮೂಡುವ ಮುನ್ನ ಸಮುದ್ರದಲ್ಲಿ ತೀರ ದೂರವಾಗಿಸಿ ಬೆಳ್ಳಂಬೆಳಗ್ಗೆ ಚುಮುಚುಮು ಚಳಿಗೆ ದೋಣಿ, ಬೋಟಿನ ಮೂಲಕ ದಡಕ್ಕೆ ಮೀನು ತರುವುದು ಅವರ ಕಾಯಕ. ಸೂರ್ಯ ನೆತ್ತಿಗೇರುತ್ತಿದ್ದಂತೆ ಮನೆ ಸೇರುತ್ತಾರೆ. ಮತ್ತೇನಿದ್ದರೂ ಮೀನು ಮಾರಾಟ ಮಾಡುವವರ ಸರದಿ.

Advertisement

ಹೀಗೆ ಬೆಳಗಾಗುವ ಮುನ್ನ ಸಮುದ್ರ ಸೇರುವ ಮಂದಿ ಒಂದಷ್ಟಾದರೆ ರಾತ್ರಿಯಿಡೀ ಮೀನು ಹುಡುಕು, ಹಗಲಿಡೀ ಬಲೆ ಬೀಸಿ ಮೀನು ಜಾಲಾಡುವ ಮಂದಿಯೂ ಇದ್ದಾರೆ. ಆದರೆ ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯುವಂತಿಲ್ಲ. ಸಮುದ್ರದ ಉಬ್ಬರ ಅಬ್ಬರದ ಮಾಹಿತಿ ಇಲ್ಲದಿದ್ದರೆ ನಿಬ್ಬೆರಗಾಗಬೇಕಾದ ಸರದಿ. ಹವಾಮಾನ ವೈಪರೀತ್ಯವಿದ್ದಾಗಲೂ ಕೆಲಸಕ್ಕೆ ಅಘೋಷಿತ ರಜೆ. ಇಂತಹ ನೂರಾರು ಕುಟುಂಬಗಳು ಕುಂದಾಪುರದ ಕೋಡಿ ಪ್ರದೇಶದಲ್ಲಿ ತಲೆ ತಲಾಂತರದಿಂದ ನೆಲೆಸಿವೆ.

ಹಕ್ಕುಪತ್ರ ಇಲ್ಲ
ಮೀನೊಂದ ತಂದೆ ಕಡಲಾಳದಿಂದ ಎನ್ನುವ ಈ ಮೀನುಗಾರರ ಕುಟುಂಬಗಳು ಇನ್ನೂ ಸ್ವಂತ ನಿವೇಶ ಹೊಂದಿಲ್ಲ. ಸಣ್ಣಪುಟ್ಟ ಮನೆಗಳಲ್ಲಿ ವಾಸಿಸುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ. ತಮ್ಮ ತಾತನ ಕಾಲದಿಂದ ಇಲ್ಲೇ ಇದ್ದರೂ ಇವರ ಹೆಸರಿನಲ್ಲಿ ತುಂಡು ಭೂಮಿಯಿಲ್ಲ. ಹಾಗಾಗಿ ಇವರಿಗೆ ಸರಕಾರದ ವಸತಿ ಯೋಜನೆಗಳು ಲಗಾವು ಆಗುವುದಿಲ್ಲ. ಬ್ಯಾಂಕಿನಿಂದ ಸಾಲ ತೆಗೆಯಲಾಗುವುದಿಲ್ಲ. ತಮ್ಮದೇ ಭೂಮಿ ಎಂದು ಹೇಳಿಕೊಳ್ಳಲು ಏನೂ ಇಲ್ಲ.

ವರದಾನವಾದ ಕಾನೂನು
ಈ ಹಿಂದಿನ ರಾಜ್ಯ ಸರಕಾರ ಅಕ್ರಮ ಸಕ್ರಮ ಯೋಜನೆಯಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ನಿವೇಶನ ಅಥವಾ ಮನೆಯಡಿ ಜಾಗ ಮಂಜೂರು ಮಾಡುವ 94ಸಿಸಿ ಕಾರ್ಯಕ್ರಮ ಹಾಕಿಕೊಂಡಿತು. ಅದರಂತೆ ಕೋಡಿ ಪ್ರದೇಶದ 118 ಮಂದಿ ಅರ್ಜಿ ಸಲ್ಲಿಸಿದರು. ಆದರೆ ಅಷ್ಟೂ ಮಂದಿಯ ಅರ್ಜಿ ತಿರಸ್ಕಾರವಾಯಿತು. ಕಾರಣ ಸಿಆರ್‌ಝಡ್‌ ವ್ಯಾಪ್ತಿ ಎಂದು!

ಸಿಆರ್‌ಝಡ್‌ ಕಾನೂನಿನ ಅಧ್ಯಯನ ಮಾಡದೇ ಇವರಿಗೆ ನಿವೇಶನ ಕೊಡುವುದನ್ನು ನಿರಾಕರಿಸಲಾಯಿತೇ, ಬಡವರಿಗೆ ಮೀಸಲಾದ ಭೂಮಿ ಕೊಡಲು ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಗೊತ್ತಿಲ್ಲ. ಒಟ್ಟಿನಲ್ಲಿ ಸಾರಾಸಗಟಾಗಿ ಅಷ್ಟೂ ಮಂದಿಯ ಅರ್ಜಿ ಏಕ ಕಾರಣದಿಂದ ತಿರಸ್ಕೃತವಾಯಿತು. ಈಗಲಾದರೂ ಮನೆಯಡಿ ಸ್ಥಳ ಮಂಜೂರಾಗಿ ಸ್ವಂತದ್ದಾದ ಹೊಸ ಮನೆ ಕಟ್ಟಬಹುದು ಎಂಬ ಕನಸು ಕಟ್ಟಿದವರ ಆಶಯ ನುಚ್ಚುನೂರಾಯಿತು. ಸಿಆರ್‌ಝಡ್‌ ನಿಯಮದ 1992ರಲ್ಲಿ ಜಾರಿಯಾದ ನಿಯಮದ ಪ್ರಕಾರ ಈ ಭಾಗದ ಜನರಿಗೆ ಮನೆ ಸ್ಥಳ ಮಂಜೂರು ಮಾಡಲು ಕಾನೂನಿನ ಅಡ್ಡಿಯಿಲ್ಲ.

Advertisement

ಕೋಡಿ ಪ್ರದೇಶ ಸಿಆರ್‌ಝೆಡ್‌ 2 ವ್ಯಾಪ್ತಿಯಲ್ಲಿದ್ದು ಅದರಂತೆ 1992ಕ್ಕಿಂತ ಮೊದಲು ರಸ್ತೆಯಿದ್ದು ರಸ್ತೆಯ ಒಂದು ಭಾಗ ಸಮುದ್ರವಾದರೆ ಇನ್ನೊಂದು ಭಾಗದಲ್ಲಿ ಸಿಆರ್‌ಝೆಡ್‌ ನಿಯಮ ಅನ್ವಯವಾಗುವುದಿಲ್ಲ.ಇಷ್ಟಾಗಿಯೂ ಸಿಆರ್‌ಝೆಡ್‌ 2 ವ್ಯಾಪ್ತಿಗೆ ಕುಂದಾಪುರ ಪುರಸಭೆಯನ್ನು ಮಾತ್ರ ಸೇರಿಸಲಾಗಿದೆ. ಹಾಗಾಗಿ ಗೋಪಾಡಿ, ಬೀಜಾಡಿ ಕಡೆಯವವರಿಗೆ ಈ ನಿಯಮದಂತೆ ಮನೆನಿವೇಶನ ದೊರೆಯುವುದಿಲ್ಲ.

ಸಿಆರ್‌ಝೆಡ್‌ ಇಲಾಖೆ ಈವರೆಗೂ ತನ್ನ ವ್ಯಾಪ್ತಿ ಯಾವುದು, ಎಷ್ಟಿದೆ, ಎಲ್ಲಿದೆ ಎಂದು ಭೂ ಗಡಿ ಗುರುತು ಮಾಡಿಲ್ಲ. ಕೇವಲ ನಕ್ಷೆಯಲ್ಲಿ, ಉಪಗ್ರಹ ಸರ್ವೆಯಲ್ಲಿ ಸಿಆರ್‌ಝೆಡ್‌ ವ್ಯಾಪ್ತಿ ಇದೆ, ಸರ್ವೆ ನಂಬರ್‌ನಲ್ಲಿದೆ ಬಿಟ್ಟರೆ ಆ ಭಾಗ ಎಲ್ಲಿದೆ ಎಂದು ತಿಳಿದಂತಿಲ್ಲ. ಹತ್ತಿಪ್ಪತ್ತು ವರ್ಷಗಳ ಹಿಂದೆ ಮಾಡಿದ ಸರ್ವೆ ನಂಬರ್‌ನ ಜಾಗ ಎಂದೋ ಸಮುದ್ರಪಾಲಾಗಿದೆ. ಹಾಗಾಗಿ ಇನ್ನಾದರೂ ಗಡಿ ಗುರುತು ಮಾಡಿ ಇಲಾಖಾ ಜಾಗ ರಕ್ಷಿಸಿಕೊಳ್ಳ ಬೇಕಿದೆ ಎನ್ನುತ್ತಾರೆ ಈ ಭಾಗದ ಜನತೆ. ಇಲ್ಲದಿದ್ದರೆ ಇಲ್ಲಿನ ನಿವಾಸಿಗಳ ಜಾಗವನ್ನೇ ತಮ್ಮದು ಎಂದು ಇಲಾಖೆ ಹೇಳಬಹುದೆಂಬ ಆತಂಕವೂ ಇದೆ. 

ಮಾಹಿತಿ ಕೇಳಿದ್ದೇವೆ
ಕೋಡಿ ತೀರದ ಜನತೆಗೆ ಹಕ್ಕುಪತ್ರ ನೀಡದಿರುವ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ. ನಿರಾಕ್ಷೇಪಣ ಪತ್ರಕ್ಕಾಗಿ ಪ್ರತ್ಯೇಕವಾಗಿ 118 ಮಂದಿಯ ಅರ್ಜಿ ಸಲ್ಲಿಸಲು ಸೂಚನೆ ಬಂದಿದೆ. 
-ಸಂತೋಷ ಶೆಟ್ಟಿ, ಸದಸ್ಯರು, ಪುರಸಭೆ

6 ಮಂದಿಗೆ ಮಾತ್ರ 
ಪುರಸಭೆ ವ್ಯಾಪ್ತಿಯಿಂದ 135 ಅರ್ಜಿ ಬಂದಿದ್ದವು. ಈ ಪೈಕಿ 6 ಅರ್ಜಿ ಕೊರಗ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಉಳಿದಂತೆ ತೋಡು, ಪರಂಬೋಕು, ಸಿಆರ್‌ಝೆಡ್‌ ಅಡ್ಡಿಯಿಂದಾಗಿ ಬಾಕಿಯಾಗಿದೆ. 
– ತಿಪ್ಪೆಸ್ವಾಮಿ, ತಹಶೀಲ್ದಾರರು, ಕುಂದಾಪುರ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next