Advertisement

ಅರಳಿಕೆರೆ ಪುನಶ್ಚೇತನಗೊಂಡರೆ ನೀರಿಗೆ ಬರವಿಲ್ಲ…!

10:26 PM May 18, 2019 | sudhir |

ಹೆಮ್ಮಾಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಕಟ್ಟುವಿನಲ್ಲಿರುವ ಅರಳಿಕೆರೆಯ ಹೂಳೆತ್ತದೇ ಹಲವು ವರ್ಷಗಳೇ ಆಗಿರುವುದರಿಂದ ಈಗ ಈ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಪಂಚಾಯತ್‌ ಈ ಬಾರಿಯಾದರೂ ಪುನಶ್ಚೇತನಗೊಳಿಸಿದಲ್ಲಿ, ಮುಂದಿನ ವರ್ಷಕ್ಕಾದರೂ ಇದರ ಪ್ರಯೋಜನ ಆಗಬಹುದು ಎನ್ನುವುದು ಈ ಭಾಗದ ರೈತರ ಅಭಿಪ್ರಾಯ.

Advertisement

ಹೆಮ್ಮಾಡಿ ಗ್ರಾಮದ ಕಟ್ಟುವಿನಲ್ಲಿರುವ ಈ ಅರಳಿಕೆರೆ ಇಲ್ಲಿನ ಸುಮಾರು 60- 70ಕ್ಕೂ ಹೆಚ್ಚಿನ ರೈತರ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿತ್ತು. ಆದರೆ ಈ ಬಾರಿ ಜನವರಿ- ಫೆಬ್ರವರಿಯಲ್ಲೇ ನೀರಿಲ್ಲದೆ ಬರಿದಾಗಿದೆ.

ಸುಮಾರು 15ರಿಂದ 20 ಎಕ್ರೆ ಕೃಷಿ ಪ್ರದೇಶಕ್ಕೆ ಈ ಕೆರೆಯೇ ವರದಾನ. ಆದರೆ ಕಳೆದ ಹಲವು ವರ್ಷಗಳಿಂದ ಈ ಕೆರೆಯ ಹೂಳೆತ್ತದ ಕಾರಣ, ಈಗ ಬತ್ತಿಯಾಗಿದೆ.

ಪುನಶ್ಚೇತನಕ್ಕೆ ಆಗ್ರಹ
ಕಟ್ಟುವಿನಲ್ಲಿ ತೋಟ, ಸೇವಂತಿಗೆ, ಇನ್ನಿತರ ತರಕಾರಿ ಕೃಷಿಗೆ ಇದೇ ಕೆರೆಯ ನೀರು ಆಧಾರವಾಗಿತ್ತು. ಇದನ್ನೇ ನಂಬಿಕೊಂಡು ಅನೇಕ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕೆರೆಯ ಹೂಳೆತ್ತಿರುವುದು ಸುಮಾರು 10 ವರ್ಷಗಳ ಹಿಂದೆಯಾಗಿದ್ದು, ಕಳೆದ ವರ್ಷ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1 ಲಕ್ಷ ರೂ. ಅನ್ನು ಹೆಮ್ಮಾಡಿ ಪಂಚಾಯತ್‌ ವತಿಯಿಂದ ಈ ಕೆರೆಯ ಹೂಳೆತ್ತಲು ಮೀಸಲಿಡಲಾಗಿತ್ತು. ಆದರೆ ಈ ಕೆರೆಯ ಬದು (ತಡೆಗೋಡೆ) ಸರಿಯಿಲ್ಲದ ಕಾರಣ, ಅದನ್ನು ಮೊದಲು ಸರಿ ಮಾಡಿಕೊಂಡು ಅನಂತರ ಹೂಳೆತ್ತುವ ನಿರ್ಧಾರ ಮಾಡಲಾಗಿತ್ತು. ಬದು ನಿರ್ಮಿಸಲು ಸುಮಾರು 4-5 ಲಕ್ಷ ರೂ. ಅಗತ್ಯವಿದ್ದು, ಈ ಕೆರೆಯ ಪುನಶ್ಚೇತನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಕೆರೆ ಹೂಳೆತ್ತಲಿ
ಈ ಕೆರೆಯಲ್ಲಿ ನೀರಿದ್ದರೆ ಇಲ್ಲಿನ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುವುದಿಲ್ಲ. ಆದರೆ ಈಗ ಈ ಕೆರೆಯ ನೀರು ಬತ್ತಿ ಹೋಗಿದ್ದು, ಬಾವಿಯಲ್ಲೂ ನೀರಿಲ್ಲ. ಪಂಚಾಯತ್‌ಗೆ ಈ ಬಗ್ಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಒಂದು ಬಾರಿ ಹೂಳೆತ್ತಿ, ತಡೆಗೋಡೆ ನಿರ್ಮಿಸಿದರೂ, ಅದು ಸಮರ್ಪಕವಾಗಿ ಕಾಮಗಾರಿ ನಡೆಸದ ಕಾರಣ ಕುಸಿದಿದೆ. ಈ ಬಾರಿಯಾದರೂ ಪುನಶ್ಚೇತನ ಮಾಡಲು ಮುಂದಾಗಲಿ
– ಅರುಣ್‌ ಕಟ್ಟು, ಕೃಷಿಕರು

Advertisement

ಪ್ರಸ್ತಾವನೆಯಿದೆ
ಕೆರೆಯ ಹೂಳೆತ್ತುವ ಕುರಿತು ಈ ಬಗ್ಗೆ ಈಗಾಗಲೇ ಪಂಚಾಯತ್‌ ವತಿಯಿಂದ ಕ್ರಿಯಾ ಯೋಜನೆಯಲ್ಲಿ ಪಟ್ಟಿ ಮಾಡಿ, ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನು ಸರಕಾರದ ಮಟ್ಟದಲ್ಲಿ ಇದು ಮುಂದುವರಿಯಬೇಕಾಗಿದೆ. ಈಗಾಗಲೇ ಕೆಲವು ಕೆರೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಲು ಅನುದಾನ ಮೀಸಲಿರಿಸಲಾಗಿದೆ.
– ಮಂಜಯ್ಯ ಬಿಲ್ಲವ, ಪಿಡಿಒ ಹೆಮ್ಮಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next