ಬೆಂಗಳೂರು: ಚುನಾವಣಾ ತಾಲೀಮು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮುಕ್ತಾಯಗೊಳ್ಳುವವರೆಗೆ ಬೆಂಗಳೂರಿನಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮ ನಡೆಸದೇ ಇರಲು ನಿರ್ಧರಿಸಿದ್ದಾರೆ.
ಕೋಲಾರದಲ್ಲಿ ಆರಂಭಗೊಂಡ ಪಂಚರತ್ನ ಯಾತ್ರೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮಾರ್ಗವಾಗಿ ಇಂದು ತುಮಕೂರು ಜಿಲ್ಲೆಯ ಪಾವಗಡ ಹಾಗೂ ಶಿರಾ ಸೇರಿದೆ. ಕೇವಲ ಹಳೆ ಮೈಸೂರು ಭಾಗ ಮಾತ್ರವಲ್ಲ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲೂ ಯಾತ್ರೆ ನಡೆಸಲು ಉದ್ದೇಶಿಸಲಾಗಿದ್ದು, ಅಲ್ಲಿಯವರೆಗೆ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸದೇ ಇರಲು ನಿರ್ಧರಿಸಲಾಗಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಜೆಡಿಎಸ್ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಪಕ್ಷದ ಅಳಿವು-ಉಳಿವಿನ ಪ್ರಶ್ನೆಯೂ ಹೌದು. ಹಳೆ ಮೈಸೂರು ಭಾಗದಲ್ಲೂ ನಗರ ಪ್ರದೇಶದಲ್ಲಿ ಬಿಜೆಪಿ,ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್ ಈ ಹಿಂದೆ ಪ್ರಬಲವಾಗುವ ಮುನ್ಸೂಚನೆಯನ್ನು ತೋರಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕುಮಾರಸ್ವಾಮಿ ಎಲ್ಲರಿಗಿಂತ ಮುಂಚಿತವಾಗಿ ಅಖಾಡಕ್ಕೆ ಇಳಿದ್ದಿದ್ದಾರೆ. ಪಂಚರತ್ನ ಯಾತ್ರೆ ಆರಂಭಗೊಂಡ ಬಳಿಕ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತೆ ಸುಧಾರಿಸಿಕೊಂಡಿದೆ. ಈ ಬಿಸಿಯನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿರುವ ಕುಮಾರಸ್ವಾಮಿ ಯಾತ್ರೆಗೆ ಬಿಡುವು ಕೊಡದೇ ಇರಲು ನಿರ್ಧರಿಸಿದ್ದಾರೆ.
ಜೆಡಿಎಸ್ ಮೂಲಗಳ ಪ್ರಕಾರ ಫೆಬ್ರವರಿ ಅಂತ್ಯದ ವೇಳೆಗೆ ಸುಮಾರು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಯಲಿದ್ದು, ಅಲ್ಲಿಯವರೆಗೂ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ ನಡೆಸದೇ ಇರಲು ನಿರ್ಧರಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ತೀರಾ ಅನಿವಾರ್ಯವಾದ ಸಂದರ್ಭದಲ್ಲಿ ಸಭೆ ನಡೆಸಬಹುದು. ವಾರಾಂತ್ಯದಲ್ಲಿ ಕುಟುಂಬ ಸದಸ್ಯರ ಭೇಟಿ ಹೊರತು ಪಡಿಸಿದರೆ ಉಳಿದೆಲ್ಲ ಸಮಯವನ್ನು ಜಿಲ್ಲೆಗಳಲ್ಲಿ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಪಕ್ಷದ ಪ್ರಣಾಳಿಕೆಯ ವಿಚಾರಗಳ ಪ್ರಚಾರವೇ ಪಂಚರತ್ನ ಯಾತ್ರೆಯಲ್ಲಿ ಇರುವುದರಿಂದ ಅದೇ ವಿಚಾರವನ್ನು ಜನರ ಮಧ್ಯೆ ಹೇಳಲಾಗುತ್ತಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಶೇ.30ರಷ್ಟು ಕೆಲಸಗಳು ಈಗಾಗಲೇ ಮುಕ್ತಾಯಗೊಂಡಿದೆ. ಅಂತಿಮ ಹಂತದ ಕಸರತ್ತು ನಡೆಯವಾಗ ಅಂದರೆ ಮಾರ್ಚ್ ನಿಂದ ಎಪ್ರೀಲ್ ವರೆಗೆ ಕುಮಾರಸ್ವಾಮಿ ಬೆಂಗಳೂರಿನಲ್ಲೇ ಕುಳಿತು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.