Advertisement

ಮೋದಿ ಪ್ರಧಾನಿ ಆಗುವುದನ್ನು ತಡೆಯುವ ಶಕ್ತಿ ಇಲ್ಲ: ವಿಜಯೇಂದ್ರ

11:52 PM Mar 17, 2024 | Team Udayavani |

ಬೆಂಗಳೂರು: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನಾಗಲಿ, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದಾಗಲಿ ಯಾವುದೇ ಶಕ್ತಿಯೂ ತಡೆಯಲಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.

Advertisement

ಭಾನುವಾರ ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕಚೇರಿ ಉದ್ಘಾಟಿಸಿ ಮಾತನಾಡಿ, ಕಲಬುರಗಿಯಲ್ಲಿ ಪ್ರಧಾನಿ ಮೋದಿ ಅವರು 2024 ರ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ, ಮೋದಿ 3ನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ, ನಮ್ಮ ರಾಜಕೀಯ ವಿರೋಧಿಗಳೂ ಹೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಶಕ್ತಿಯೂ ಮೋದಿ ಮತ್ತೆ ಪ್ರಧಾನಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ಕಾಂಗ್ರೆಸ್‌ನವರು ಸಹ ಒಪ್ಪುತ್ತಾರೆ. ಇಡೀ ದೇಶದಲ್ಲೇ ವಾತಾವರಣ ಹಾಗಿದೆ ಎಂದರು.

ನರೇಂದ್ರ ಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್‌ ಕಾ ಪ್ರಯಾಸ್‌ ಕೇ ಸಾಥ್‌ ಎಂದು ಯಾವಾಗಲೂ ಹೇಳುತ್ತಾರೆ. ಅವರು 2047ರ ಹೊತ್ತಿಗೆ ಈ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಅಂತಹ ಪ್ರಧಾನಿ ಕಲಬುರಗಿಗೆ ಬಂದಾಗ ರಾಜ್ಯಕ್ಕೇನು ಕೊಡುಗೆ ಕೊಟ್ಟಿದ್ದಾರೆ? ಏನು ಅಭಿವೃದ್ಧಿ ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದೇಶ ಮತ್ತು ಕರ್ನಾಟಕಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ಏನು ಎಂಬುದಕ್ಕೆ ಜೂ.4 ರಂದು ರಾಜ್ಯ ಪ್ರಜ್ಞಾವಂತ ಮತದಾರರು ಉತ್ತರ ನೀಡುತ್ತಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಉತ್ತರಿಸಲಿದ್ದಾರೆ. ತಮ್ಮನ್ನು ತಾವು ಪ್ರಧಾನಮಂತ್ರಿಯಲ್ಲ, ಪ್ರಧಾನಸೇವಕ ಎಂದು ಕರೆದುಕೊಳ್ಳುವ ಮೂಲಕ ಕೆಲಸ ಮಾಡುತ್ತಲೇ ಇದ್ದಾರೆ. ಕಳೆದ 10 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಹಗಲೂ ರಾತ್ರಿ ದೇಶದ ಅಭಿವೃದ್ಧಿಗಾಗಿ ಮೋದಿ ಶ್ರಮಿಸುತ್ತಿದ್ದಾರೆ. ಅವರ ತಾಯಿಯ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ಮಾಡಿ, ಮರುಕ್ಷಣವೇ ಕರ್ತವ್ಯನಿರತರಾದರು ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next