Advertisement

ಆರೋಗ್ಯ ಕೇಂದ್ರದಲ್ಲಿ ಕೈಕೊಟ್ಟ ವಿದ್ಯುತ್! ಮೊಬೈಲ್ ಬೆಳಕಿನಲ್ಲೇ ನಡೆಯಿತು ಹೆರಿಗೆ

07:41 PM Nov 11, 2020 | sudhir |

ಕಲಬುರಗಿ: ಹೆರಿಗೆ ಮಾಡಿಸುವ ಸಮಯದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ ಮೊಬೈಲ್ ಟಾರ್ಚ್ ಲೈಟ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಅದೃಷ್ಟವಶಾತ್ ಸುಲಭ ಹೆರಿಗೆ ಆಗಿದ್ದರಿಂದ , ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Advertisement

ಅದೇ ಗ್ರಾಮದ ಸಿದ್ದಮ್ಮ ಹನುಮಂತ ಅವರಿಗೆ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದ್ದರಿಂದ ಕುಟುಂಬಸ್ಥರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 10.30ರ ಸುಮಾರಿಗೆ ಕರೆದುಕೊಂಡು ಬಂದಿದ್ದರು. ಸಿದ್ದಮ್ಮ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರಿಂದ ರಾತ್ರಿ ಪಾಳಿಯ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಆದರೆ, ಸರಿಯಾಗಿ 11 ಗಂಟೆಗೆ ವಿದ್ಯುತ್ ಕಡಿತವಾಗಿದೆ.

ಕೇಂದ್ರದಲ್ಲಿ ಸೋಲಾರ್ ಬ್ಯಾಟರಿ ವ್ಯವಸ್ಥೆ ಇದ್ದರೂ, ಅದು ಕೈಕೊಟ್ಟಿದೆ. ಇದರಿಂದ ವಿದ್ಯುತ್ ಗಾಗಿ ಸ್ವಲ್ಪ ಹೊತ್ತು ಕಾದಿದ್ದಾರೆ. ಅಲ್ಲದೇ, ವಿದ್ಯುತ್ ಬಗ್ಗೆ ವಿಚಾರಿಸಲು ಜೆಸ್ಕಾಂ ನವರಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ.

ಇದನ್ನೂ ಓದಿ:ಮಹಾದೇವ ಭೈರಗೊಂಡ ಶೂಟ್ ಔಟ್ ಪ್ರಕರಣ : ಮತ್ತೆ ಮೂವರ ಬಂಧನ, ಬಂಧಿತರ‌ ಸಂಖ್ಯೆ16ಕ್ಕೆ ಏರಿಕೆ

ಹೀಗಾಗಿ ಕುಟುಂಬದವರು ನಾಲ್ವೈದು ಮೊಬೈಲ್‍ಗಳ ಟಾರ್ಚ್ ಹಾಗೂ ಮತ್ತೊಂದು ಬ್ಯಾಟರಿ ಟಾರ್ಚ್ ಸಿದ್ಧ ಮಾಡಿದ್ದಾರೆ. ಅದೇ ಟಾರ್ಚ್ ಬೆಳಕಿನಲ್ಲಿ ಸಿದ್ದಮ್ಮ ಅವರಿಗೆ ಸ್ಟಾಫ್ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಸಿದ್ದಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಮಾಡಿಸುವ ಹೊತ್ತಿಗೆ ನಸುಕಿನ ಜಾವ 4 ಗಂಟೆ ಆಗಿತ್ತು, ಆದರೂ, ವಿದ್ಯುತ್ ಮಾತ್ರ ಬಂದಿಲ್ಲ.

Advertisement

ರಾತ್ರಿ 11 ಗಂಟೆ ಸುಮಾರಿಗೆ ಕಡಿತವಾದ ವಿದ್ಯುತ್ ಬಾರದೆ ಇರುವುದರಿಂದ ಹಾಗೂ ತೀವ್ರ ನೋವು ಇರುವುದರಿಂದ ಅನಿವಾರ್ಯವಾಗಿ ಹೆರಿಗೆ ಮಾಡಿಸಲೇಬೇಕಿತ್ತು. ಈ ಹಿಂದೆ ಇಂತಹ ಪ್ರಸಂಗಗಳು ನಡೆದಿರಲಿಲ್ಲ ಎಂದು ನರ್ಸ್ ತಿಳಿಸಿದ್ದಾರೆ.

ಹೆರಿಗೆ ಸಮಯದಲ್ಲಿ ಎದುರಾದ ಅವ್ಯವಸ್ಥೆ ಹಾಗೂ ಪರ್ಯಾಯ ವಿದ್ಯುತ್ ವ್ಯವಸ್ಥೆ ಇರದ ಬಗ್ಗೆ ಬಾಣಂತಿಯ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾತ್ರಿ ನರ್ಸ್ ಹೊರತು ಪಡಿಸಿ ವೈದ್ಯರು ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶೋಕಸ್ ನೋಟಿಸ್
ಕೊಲ್ಲೂರು ಗ್ರಾಮದಲ್ಲಿ ನಡೆದ ಘಟನೆ ಸಂಬಂಧ ವಿದ್ಯುತ್ ವ್ಯವಸ್ಥೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸದ ಕುರಿತು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗೆ ಕಾರಣ ಕೇಳಿ ಶೋಕಸ್ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ತಡೆಯಲು ಎಲ್ಲ ಆರೋಗ್ಯ ಕೇಂದ್ರಗಳಿಗೂ ಜ್ಞಾಪನಾ ಪತ್ರ ಬರೆಯಲಾಗಿದೆ. ಕಡ್ಡಾಯವಾಗಿ ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳುವಂತೆ ಎಚ್ಚರ ವಹಿಸಲಾಗಿದೆ. -ಡಾ.ರಾಜಶೇಖರ್ ಮಾಲಿ, ಡಿಎಚ್‍ಓ

Advertisement

Udayavani is now on Telegram. Click here to join our channel and stay updated with the latest news.

Next