Advertisement

ಬೈಂದೂರು: 5 ದಿನಗಳಿಂದ ಕತ್ತಲಲ್ಲಿವೆ ಕುಗ್ರಾಮಗಳು

02:21 AM Aug 11, 2019 | sudhir |

ಬೈಂದೂರು: ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೈಂದೂರು, ಕುಂದಾಪುರ ಭಾಗಗಳಲ್ಲಿ ಮಳೆಯಿಂದಾದ ಹಾನಿ ಅಷ್ಟೊಂದು ಪ್ರಮಾಣದಲ್ಲಿಲ್ಲದಿದ್ದರೂ ಸಹ ಮಳೆಯ ಅವಾಂತರಗಳು ಮಾತ್ರ ಗ್ರಾಮೀಣ ಭಾಗದ ಜನರನ್ನು ಕತ್ತಲಲ್ಲಿ ಇರುವಂತಾಗಿಸಿವೆ.

Advertisement

ಬೈಂದೂರು ಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾಮೀಣ ಭಾಗಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾದರೆ ಹತ್ತಾರು ಕಿ.ಮೀ. ಕಾಡು ದಾರಿಯಲ್ಲಿ ಕಂಬ ಹಾಕಲಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮರದ ರೆಂಬೆ ಉದುರಿ ವಿದ್ಯುತ್‌ ವ್ಯತ್ಯಯವಾಗುತ್ತಿತ್ತು. ಆದರೆ ಈ ವರ್ಷ ಮಳೆಯ ಜತೆಗೆ ಗಾಳಿಯ ಅಬ್ಬರ ಅಧಿಕವಿರುವ ಕಾರಣ ಹೆಚ್ಚಿನ ಹಳ್ಳಿ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿವೆ.

ಯಡ್ತರೆ ಗ್ರಾಮದ ತೂದಳ್ಳಿ ರಸ್ತೆಯಲ್ಲಿ ಮರ ಉರುಳಿದ ಪರಿಣಾಮ ತೂದಳ್ಳಿ, ಹೊಸೂರು, ಗೋಳಿಬೇರು, ಆಲಂದೂರು, ಕಿಸ್ಮತ್ತಿ ಮುಂತಾದ ಭಾಗಗಳಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್‌ ಸಂಪರ್ಕ ಇಲ್ಲದೆ ಕತ್ತಲಲ್ಲಿ ಇದೆ.

ಬೆಳಗ್ಗೆ ದುರಸ್ತಿಯಾದರೆ ಸಂಜೆ ಮತ್ತದೇ ವ್ಯಥೆ

ಈ ಬಾರಿ ವಿದ್ಯುತ್‌ ಇಲಾಖೆ, ಲೈನ್‌ಮೆನ್‌ಗಳನ್ನು ಮಳೆ ಹೈರಾಣಾಗಿಸಿದೆ. ಬೆಳಗ್ಗೆ ದುರಸ್ತಿ ಮಾಡಿದರೆ ಕಚೇರಿಗೆ ಮರಳುವವರೆಗೆ ಮತ್ತೆ ಮರ ಉರುಳಿ ಲೈನ್‌ಗಳು ಧರಾಶಾಯಿಯಾಗುತ್ತಿವೆೆ. ಹಳ್ಳಿ ಪ್ರದೇಶಗಳಂತೂ ವಿದ್ಯುತ್‌ ಸಂಪರ್ಕ ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಇನ್ನು ನಾಲ್ಕೈದು ದಿನ ದುರಸ್ತಿಗಾಗಿ ಸಮಯ ಬೇಕು ಎನ್ನುವುದು ಮೆಸ್ಕಾಂ ಅಧಿಕಾರಿಗಳ ಅಭಿಪ್ರಾಯ.

Advertisement

ಮೊಬೈಲ್ ಚಾರ್ಜ್‌ ಸಮಸ್ಯೆ

ಹಳ್ಳಿಗಳಲ್ಲಿ ನೆಟ್ವರ್ಕ್‌ಗಳಿಲ್ಲದೆ ಕೆಲವೆಡೆ ಸಿ.ಡಿ.ಎಂ. ದೂರವಾಣಿ ಅಳವಡಿಸಲಾಗಿದೆ. ಇದಕ್ಕೆ ವಿದ್ಯುತ್‌ ಅವಶ್ಯ. ಆದರೆ ನಾಲ್ಕೈದು ದಿನಗಳಿಂದ ಕರೆಂಟ್ ಇಲ್ಲದ ಕಾರಣ ಮೊಬೈಲ್ ಚಾರ್ಜ್‌ ಮಾಡಲೂ ಸಾಧ್ಯವಿಲ್ಲ. ದೂರವಾಣಿಯಂತೂ ಇಲ್ಲ, ಹೀಗಾಗಿ ಹಳ್ಳಿಗಳಲ್ಲಿ ಕೃಷಿಯನ್ನು ನಂಬಿಕೊಂಡಿರುವ ಪಾಲಕರನ್ನು ಸಂಪರ್ಕಿಸಲಾಗದೆ ಪಟ್ಟಣದಲ್ಲಿರುವ ಕುಟುಂಬದವರು ಆತಂಕ ಪಡುವಂತಾಗಿದೆ.

ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಕಟ್

ಬೈಂದೂರು ಕ್ಷೇತ್ರದ ಶಿರೂರು ಸೇರಿದಂತೆ ಹಲವು ಕಡೆ ಕಳೆದ ಮೂರು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್ವರ್ಕ್‌ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್‌ ವ್ಯತ್ಯಯದ ಕಾರಣ ಜನರೇಟರ್‌ ಸೌಲಭ್ಯ ಇಲ್ಲದಿರುವುದು ನೆಟ್ವರ್ಕ್‌ ಕಡಿತಗೊಳಿಸಲು ಪ್ರಮುಖ ಕಾರಣ. ರಾತ್ರಿ ವೇಳೆ ಮಾತ್ರ ಅತ್ಯಂತ ಅಪಾಯಕಾರಿಯಾಗಿದೆ. ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿ ಭೂಮಿ ಸಹ ಜಲಾವೃತಗೊಂಡಿದೆ.

ಬೈಂದೂರು ಮೆಸ್ಕಾಂಗೆ20 ಲಕ್ಷ ರೂ.ಗೂ ಅಧಿಕ ನಷ್ಟ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೈಂದೂರು ಮೆಸ್ಕಾಂಗೆ 20 ಲ.ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಲೂರು, ಬಸ್ರಿಬೇರು, ಮೂದೂರು, ಜಡ್ಕಲ್, ತೂದಳ್ಳಿ, ಹೊಸೂರು, ಬೈಂದೂರು ಸೇರಿದಂತೆ ವಿವಿಧ ಕಡೆ 50 ರಿಂದ 60 ವಿದ್ಯುತ್‌ ಕಂಬಗಳು ತುಂಡಾಗಿವೆ. ನಾಲ್ಕಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿವೆ. ಕಳೆದೆರಡು ದಿನ ಗಳಿಂದ ಇಲಾಖೆಗೆ ಅಪಾರ ಪ್ರಮಾಣದ ಸಮಸ್ಯೆ ಉಂಟಾಗಿದೆ. ಹೀಗಾಗಿ ವಿದ್ಯುತ್‌ ವಿತರಣೆ ಯಲ್ಲಿ ವ್ಯತ್ಯಯ ಉಂಟಾಗಿದೆ ಎಂದಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next