ಆಗ್ರಾ: ಭಾರತ ಮತ್ತು ಪಾಕಿಸ್ಥಾನ ಕ್ರಿಕೆಟ್ ತಂಡಗಳ ನಡುವೆ ಸದ್ಯೋಭವಿಷ್ಯದಲ್ಲಿ ಯಾವುದೇ ಪಂದ್ಯಗಳು ನಡೆಯುವ ಸಾಧ್ಯತೆಗಳನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆಯ ರಾಜ್ಯ ಸಚಿವ ಕಿರೆಣ್ ರಿಜಿಜು ಅವರು ತಳ್ಳಿ ಹಾಕಿದ್ದಾರೆ. ಅದರಲ್ಲೂ ಎರಡೂ ದೇಶಗಳ ನಡುವೆ ಸದ್ಯ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ಕ್ರಿಕೆಟ್ ತಂಡಗಳ ನಡುವೆ ಒಂದು ಪಂದ್ಯ ನಡೆಯುವುದೂ ಅನುಮಾನ ಎಂದು ರಿಜಿಜು ಅವರು ಅಭಿಪ್ರಾಯಪಟ್ಟಿದ್ದಾರೆ.
ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿರುವ ವಿಚಾರ ಹಲವಾರು ಬಾರಿ ಸಾಬೀತುಗೊಂಡ ಬಳಿಕ ಆ ದೇಶ ಭಾರತದ ವಿಶ್ವಾಸವನ್ನು ಪುನರ್ ಗಳಿಸಬೇಕಾದರೆ ಪಾಕಿಸ್ಥಾನವು ಸಾಕಷ್ಟು ಶ್ರಮಪಡಬೇಕು ಎಂಬ ವಿಚಾರವನ್ನೂ ಸಹ ಸಚಿವ ರಿಜಿಜು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಭಾಗವಹಿಸುವ ಉದ್ದೇಶದಿಂದ ಉತ್ತರಪ್ರದೇಶದ ಮಥುರಾಗೆ ಆಗಮಿಸಿದ ಕಿರೆಣ್ ರಿಜಿಜು ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿಶೇಷವಾಗಿ ಕೊಂಡಾಡಿದರು. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ವಿಚಾರದಲ್ಲಿ ದೇಶದ ಜನತೆ ಪ್ರಧಾನಿ ಮೋದಿ ಅವರಿಗೆ ವಿಶೇಷ ಅಧಿಕಾರವನ್ನು ನೀಡಿದ್ದಾರೆ ಎಂದು ರಾಜ್ಯ ಸಚಿವರು ಅಭಿಪ್ರಾಯಪಟ್ಟರು.
2020ರ ಏಷ್ಯಾ ಕಪ್ ಕೂಟ ಪಾಕಿಸ್ಥಾನದಲ್ಲಿ ನಡೆಯಲಿದ್ದು ಈ ವಿಚಾರದಲ್ಲಿ ಭಾರತದ ಭಾಗವಹಿಸುವಿಕೆಯನ್ನು ಜೂನ್ ತಿಂಗಳೊಳಗೆ ಖಚಿತಪಡಿಸಬೇಕು ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಸೋಮವಾರದಂದು ಬಿಸಿಸಿಐಗೆ ತಾಕೀತು ಮಾಡಿತ್ತು.
ಈ ಹಿನ್ನಲೆಯಲ್ಲಿ ಕಿರೆಣ್ ರಿಜಿಜು ಅವರ ಈ ಪ್ರತಿಕ್ರಿಯೆ ಮಹತ್ವವನ್ನು ಪಡೆದಿದೆ.