ಹೊನ್ನಾಳಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಸೋಮವಾರ ಪಟ್ಟಣದ ಕುಂಬಾರಗುಂಡಿ ಕೇರಿಯ ಗಣಪತಿ ನಿರ್ಮಾಣ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗಣಪತಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪ್ಲಾಸ್ಟ್‌ರ್ ಆಫ್ ಪ್ಯಾರಿಸ್ ಗಣಪತಿಯನ್ನು ತಯಾರಿಸಬಾರದು ಎಂದು ಹೇಳಿದರು.
ಪರಿಸರಕ್ಕೆ ಹಾನಿ ತರುವಂತಹ ಪಿಒಪಿ ಗಣಪತಿಗಳ ನಿರ್ಮಾಣ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸ್ವಾಭಾವಿಕವಾಗಿ ದೊರೆಯುವ ಮಣ್ಣಿನಿಂದಲೇ ಗಣಪತಿಗಳ ನಿರ್ಮಾಣವಾಗಬೇಕು. ಮೂರ್ತಿ ನಿರ್ಮಾಣದಲ್ಲಿ ಪರಿಸರ, ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳನ್ನು ಬೆರೆಸಬಾರದು ಎಂದು ಹೇಳಿದರು.
ಪಟ್ಟಣದಲ್ಲಿ ವಿವಿಧ ಕೇರಿ, ಗಲ್ಲಿಗಳಲ್ಲಿ ಹಾಗೂ ಶಾಲೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾರೆ. ಗಣಪತಿ ವಿಸರ್ಜನೆಯನ್ನು ಕೆರೆ, ಬಾವಿ, ನದಿ ಸೇರಿದಂತೆ ಕುಡಿಯುವ, ಬಳಕೆ ಜಲಮೂಲಗಳಲ್ಲಿ ಮಾಡುತ್ತಾರೆ. ಪಿಒಪಿ ಗಣಪತಿಗಳನ್ನು ನಿರ್ಮಾಣ ಮಾಡಿದರೆ ಜಲಚರಗಳು, ಜಾನುವಾರುಗಳಿಗೆ ತೀವ್ರ ತೊಂದರೆಯಾಗುವುದಲ್ಲದೆ ಜಲ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಪಟ್ಟಣದ ಕುಂಬಾರ ಕೇರಿ ಬೀದಿಯಲ್ಲಿ 10ಕ್ಕು ಹೆಚ್ಚು ಕುಟುಂಬಗಳು ಗಣಪತಿ ಮೂರ್ತಿಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿವೆ. ತಹಶೀಲ್ದಾರ್ ಜತೆ ಮಾತನಾಡಿದ ಮೂರ್ತಿ ತಯಾರಕರು, ವಂಶಪಾರಂಪರ್ಯವಾಗಿ ನಾವೆಲ್ಲ ಮಣ್ಣಿನ ಗಣಪತಿಗಳನ್ನು ತಯಾರು ಮಾಡುತ್ತ ಬಂದಿದ್ದೇವೆ. ಇದಕ್ಕಾಗಿ ಬೇರೆ ತಾಲೂಕುಗಳಿಗೆ ತೆರಳಿ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತೇವೆ. ಆದರೆ ಯಾವ ಕಾರಣಕ್ಕೂ ಪಿಒಪಿ ಗಣಪತಿ ಮಾಡುವುದಿಲ್ಲ. 2ರಿಂದ 3 ತಿಂಗಳ ಮೊದಲೇ ಜನ ನಮಗೆ ಮುಂಗಡ ಹಣ ನೀಡಿ ಗಣಪತಿ ಮೂರ್ತಿ ಬುಕ್ ಮಾಡಿರುತ್ತಾರೆ. ಅಂತಹವರಿಗೆ ಮಾತ್ರ ನಾವು ಗಣಪತಿ ವಿತರಿಸುತ್ತೇವೆ ಎಂದು ತಿಳಿಸಿದರು.
ಹೊರಗಿನಿಂದ ವ್ಯಾಪಾರಿಗಳು ಬಂದು ಪಿಒಪಿ ಗಣಪತಿ ಮಾರದಂತೆ ಬಂದೋಬಸ್ತ್ ಮಾಡುತ್ತೇವೆ. ಪಟ್ಟಣದವರು ಕೂಡಾ ಪಿಒಪಿ ಗಣಪತಿ ಮಾಡದೇ ಸಹಕರಿಸಬೇಕು ಎಂದು ಪ.ಪಂ ಅಧಿಕಾರಿ ನುಡಿದರು. ಪ.ಪಂ ಸಿಬ್ಬಂದಿ ನಾಗೇಶ್ ಇದ್ದರು.