Advertisement

ಪರಿಹಾರ ವಿತರಣೆಯಲ್ಲಿ ರಾಜಕೀಯ ಬೇಡ: ಅನಂತ

06:01 PM Aug 14, 2019 | Team Udayavani |

ಹಳಿಯಾಳ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ಎಲ್ಲಿಯೂ ರಾಜಕೀಯ ಬೆರೆಸದೆ ಹಾಗೂ ಯಾವ ರಾಜಕಾರಣಿಗೂ ಕಾಯದೆ ಪ್ರಾಮಾಣಿಕವಾಗಿ ವಿತರಿಸುವ ಕಾರ್ಯವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

Advertisement

ಭಾರಿ ಮಳೆಯಿಂದ ಹಳಿಯಾಳದಲ್ಲಿ ನೆರೆ ಹಾವಳಿಯಿಂದ ಉಂಟಾದ ಹಾನಿ ವೀಕ್ಷಣೆಗೆ ಆಗಮಿಸಿದ ಅವರು ಪಟ್ಟಣದ ಲೋಕೊಪಯೋಗಿ ಪ್ರವಾಸಿ ಭವನದಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ನೆರೆಯಿಂದ ಉಂಟಾಗಿರುವ ಹಾನಿ ಕುರಿತು ಮಾಹಿತಿ ಪಡೆದು ಸಲಹೆ-ಸೂಚನೆಗಳನ್ನು ನೀಡಿದರು.

ಹಳಿಯಾಳ ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಮಾಹಿತಿ ನೀಡಿ ತಾಲೂಕಿನಲ್ಲಿ 460 ಮನೆಗಳು ಹಾನಿಗೊಳಗಾಗಿವೆ. 3ಜಾನುವಾರುಗಳು ಸಾವಿಗಿಡಾಗಿವೆ. ಮುಖ್ಯವಾಗಿ ಕೆಸರೊಳ್ಳಿಯಲ್ಲೇ ಹೆಚ್ಚಿನ ಹಾನಿಯಾಗಿದೆ. ಸದ್ಯ ಎಲ್ಲ ಗಂಜಿ ಕೇಂದ್ರಗಳು ಮುಚ್ಚಲ್ಪಟ್ಟಿದ್ದು ಸಂತ್ರಸ್ತರಿಗೆ ಆಹಾರದ ಕಿಟ್ ನಾಳೆಯಿಂದ ವಿತರಿಸಲಾಗುವುದು ಎಂದರು.

ಪಶು ವೈದ್ಯ ಇಲಾಖೆಯ ಡಾ| ನದಾಫ ಅವರು 10 ಜಾನುವಾರು ನಾಪತ್ತೆಯಾಗಿರುವ ಕುರಿತು 5ಸಾವಿಗಿಡಾಗಿರುವ ಬಗ್ಗೆ ದೂರುಗಳಿವೆ. ಜಾನುವಾರುಗಳಿಗೆ ಮೇವಿನ ಅವಶ್ಯಕತೆ ಇದ್ದು ಮೇವನ್ನು ಪೂರೈಸಬೇಕೆಂದರು.

ನೀರಾವರಿ ಇಲಾಖೆಯವರು 21 ಕೆರೆಗಳು, 114 ಬಾಂದಾರಗಳಿಗೆ ಹಾನಿಯಾಗಿದ್ದು ಮರು ನಿರ್ಮಾಣಕ್ಕೆ 22 ಕೋಟಿ ರೂ. ಅವಶ್ಯಕತೆ ಇದೆ ಎಂದರು. ಹೆಸ್ಕಾಂ ಅಧಿಕಾರಿ ರವೀಂದ್ರ ಮೆಟಗುಡ್ಡ ಮಾಹಿತಿ ನೀಡಿ 649 ಕಂಬಗಳು ಹಾಳಾಗಿವೆ, 240 ಬಾಗಿವೆ, 44 ಟಿಸಿ ಹಾಳಾಗಿದ್ದು ಈಗಾಗಲೇ ಎಲ್ಲ ಗ್ರಾಮಗಳಲ್ಲಿ ವಿದ್ಯುತ್‌ ನೀಡುವ ಕಾರ್ಯ ಮಾಡಲಾಗಿದ್ದು ಉಳಿದ ನಾಲ್ಕೂ ಹಳ್ಳಿಗಳಲ್ಲಿ ವಾರದಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುವುದು ಎಂದರು.

Advertisement

ಜಿಪಂನವರು 87 ಅಂಗನವಾಡಿಗಳು, ಸೇತುವೆಗಳಿಗೆ, ರಸ್ತೆಗಳಿಗೆ ಹಾನಿಯಾಗಿರುವುದಾಗಿ, ಶಿಕ್ಷಣಾಧಿಕಾರಿಗಳು 76 ಶಾಲಾ ಕೊಠಡಿಗಳಿಗೆ, 42 ಬಿಸಿಯೂಟ ಹಾಗೂ ದಾಸ್ತಾನು ಕೊಠಡಿಗಳಿಗೆ ಹಾನಿಯಾಗಿರುವ ಮಾಹಿತಿ ನೀಡಿದರು. ಕೃಷಿ ಮತ್ತು ತೊಟಗಾರಿಕೆ ಇಲಾಖೆಯವರು ಹಾನಿ ಕುರಿತು ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ಇನ್ನೂ ಮಳೆ, ನೆರೆಯಿಂದ ನಿಜವಾಗಿಯೂ ಸಂತ್ರಸ್ತರಾದವರಿಗೆ ಪರಿಹಾರ ದೊರಕಬೇಕು. ಯಾರ್ಯಾರೋ ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರದ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಂಭವವಿರುವ ಕಾರಣ ಸ್ಥಳೀಯವಾಗಿ ಅಧಿಕಾರಿಗಳು ಯಾವುದೇ ರಾಜಕಾರಣ ಮಾಡದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಅಧಿಕಾರಿಗಳ ಕಾರ್ಯದ ಬಗ್ಗೆ ನಮಗೆ ಇಂಚಿಂಚು ಮಾಹಿತಿ ದೊರೆಯುತ್ತದೆ ಕಾರಣ ಯೋಚಿಸಿ-ಆಲೋಚಿಸಿ ಕೆಲಸ ಮಾಡಿ ತೊಂದರೆಗೆ ಒಳಗಾಗಬೇಡಿ ಎಂದು ನಯವಾಗಿ ಸಂಸದ ಹೆಗಡೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೈತರ ಪಂಪ್‌ಸೆಟ್‌ಗಳು ನೀರಿಗೆ ಕೊಚ್ಚಿಹೊಗಿರುವ ಕುರಿತು ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ ಶಾಲೆಗಳಲ್ಲಿ ಸಮಸ್ಯೆ ಇದ್ದರೆ ತಹಶೀಲ್ದಾರ್‌ ಗಮನಕ್ಕೆ ತರುವಂತೆ ಬಿಇಒಗೆ ಸೂಚಿಸಿದರು.

ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಬಸವರಾಜ ಕಳಶೆಟ್ಟಿ, ಪ್ರಮುಖರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next