Advertisement

ಸವದಿ ಗಾಳಿಯಲ್ಲಿ ಗುಂಡು ಹೊಡೆದರೆ ಪ್ರಯೋಜನವಿಲ್ಲ: CM ಬೊಮ್ಮಾಯಿ

11:41 PM Apr 26, 2023 | Team Udayavani |

ಬೆಳಗಾವಿ: ರಾಜ್ಯ ಸರಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡುತ್ತಿರುವ ಲಕ್ಷ್ಮಣ ಸವದಿ ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನವಿಲ್ಲ. ಅವರು ನಿರ್ದಿಷ್ಟ ಪ್ರಕರಣವನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸವದಿ ಬಿಜೆಪಿಯಲ್ಲಿದ್ದಾಗ ಈ ಮಾತನ್ನು ಹೇಳದೆ ಯಾಕೆ ಸುಮ್ಮನಿದ್ದರು? ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಸವದಿ ಹೇಳಿಕೆ ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಯ ವರ್ಚಸ್ಸನ್ನು ಕೆಡಿಸಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ. ಅದು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್‌. ಭ್ರಷ್ಟಾಚಾರ ಕಾಂಗ್ರೆಸ್‌ನ ಅವಿಭಾಜ್ಯ ಅಂಗ. ಹೀಗಿರುವಾಗ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದರು.

ಟಿಕೆಟ್‌ ಹಂಚಿಕೆಯಲ್ಲಿ ಕೆಲವು ಬದಲಾವಣೆ ಮಾಡಿದ್ದಕ್ಕೂ ಜನ ಸ್ಪಂದಿಸಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದೇನೆ. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ಮೇಲೆ ಇಡೀ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಬರಲಿದೆ. ಸಂಖ್ಯಾ ಬಲದಷ್ಟೇ ಉತ್ಸಾಹವೂ ದೊಡ್ಡ ಪ್ರಮಾಣದಲ್ಲಿ ಇದೆ. ಈಗ ಬಂದಿರುವುದೆಲ್ಲ ಹಳೆಯ ಸಮೀಕ್ಷೆ. ನಮ್ಮದೇ ಆದ ಮಾಹಿತಿ ವ್ಯವಸ್ಥೆ ಇದೆ. ಅದರ ಮೇಲೆ ರಣನೀತಿ ಇರುತ್ತದೆ. ತಳಮಟ್ಟದಲ್ಲಿ ನಿಜ ಚಿತ್ರಣ ನೋಡುತ್ತಿದ್ದು, ಸ್ಪಷ್ಟ ಬಹುಮತ ಬರಲಿದೆ ಎಂದರು.

ಉಮೇಶ ಕತ್ತಿ ನೆನೆದು ಕಣ್ಣೀರು
ಬೆಳಗಾವಿ: ಆತ್ಮೀಯ ಗೆಳೆಯ ದಿ| ಉಮೇಶ ಕತ್ತಿ ಅವರನ್ನು ನೆನೆದು ಮುಖ್ಯಮಂತ್ರಿ ಬಸವವರಾಜ ಬೊಮ್ಮಾಯಿ ಕಣ್ಣೀರು ಸುರಿಸಿದರು.
ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿಖೀಲ್‌ ಕತ್ತಿ ಪರ ಪ್ರಚಾರಾರ್ಥ ಬುಧವಾರ ನಡೆದ ರೋಡ್‌ ಶೋ ಬಳಿಕ ಮಾತನಾಡಲು ಆರಂಭಿಸುತ್ತಿದ್ದಂತೆ ಉಮೇಶ ಕತ್ತಿ ಅವರನ್ನು ನೆನೆದು ಕಣ್ಣೀರು ಹಾಕಿದರು.

ಉಮೇಶಣ್ಣ ಕತ್ತಿ ನಮ್ಮ ಜತೆಗೆ ಇಲ್ಲ. ಆದರೆ ಅವರು ಸ್ವರ್ಗದಲ್ಲಿದ್ದುಕೊಂಡು ನಿಖೀಲ್‌ ಕತ್ತಿ ಹಾಗೂ ರಮೇಶ ಕತ್ತಿ ಅವರಿಗೆ ಆಶೀರ್ವಾದ ಮಾಡುತ್ತಿದ್ದಾರೆ. ರಾಜಕೀಯ ಮೀರಿ ಕತ್ತಿ ಕುಟುಂಬದೊಂದಿಗೆ ನಮ್ಮ ಸಂಬಂಧ ಇದೆ. ಮೂರನೇ ತಲೆಮಾರಿನವರೆಗೂ ನಮಗೂ ಹಾಗೂ ಕತ್ತಿ ಕುಟುಂಬಕ್ಕೆ ಸಂಬಂಧ ಇದೆ. ಹುಕ್ಕೇರಿ ಮತ್ತು ಚಿಕ್ಕೋಡಿಯಲ್ಲಿ ನಮ್ಮ ಗೆಲುವು ನಿಶ್ಚಿತವಿದೆ. ಅಂತರ ಹೆಚ್ಚಿಸಬೇಕು ಎಂದರು.

Advertisement

ಉಮೇಶ ಕತ್ತಿ ಸೋಲಿಲ್ಲದ ಸರದಾರ. ನಿರಂತರವಾಗಿ ಹುಕ್ಕೇರಿಯಿಂದ 9 ಬಾರಿ ಸ್ಪ ರ್ಧಿಸಿ ಗೆದ್ದಿದ್ದಾರೆ. ತಂದೆ ವಿಶ್ವನಾಥ ಕತ್ತಿ ಅವರ ನಿಧನದ ಬಳಿಕ 25ನೇ ವಯಸ್ಸಿನಲ್ಲೇ ಉಮೇಶ ಕತ್ತಿ ವಿಧಾನಸಭೆ ಪ್ರವೇಶಿಸಿದರು. ನಿಮ್ಮೆಲ್ಲರ ಆಶೀರ್ವಾದದಿಂದ ಹಿಂದಿರುಗಿ ನೋಡದೆ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.
ಅಭ್ಯರ್ಥಿಗಳಾದ ನಿಖೀಲ್‌ ಕತ್ತಿ, ರಮೇಶ ಕತ್ತಿ, ಶಶಿಕಲಾ ಜೊಲ್ಲೆ, ಅಭಯ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next