Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಟ್ಟೆ ಬ್ಯಾಗ್‌, ಬಿದಿರಿನ ಬಾಟಲ್‌ ಬಳಕೆ

03:02 PM Mar 21, 2022 | Team Udayavani |

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದರೂ ಕೂಡ ಪರಿಣಾಮಕಾರಿಯಾಗಿ ಜಾರಿಯಾಗದೆ ಟನ್‌ಗಟ್ಟಲೆ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿರುವುದು ಪರಿಸರಕ್ಕೆ ಮಾತ್ರವಲ್ಲದೇ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಅರಣ್ಯ ಪ್ರದೇಶದ ವನ್ಯಜೀವಿಗಳಿಗೂ ತೊಡಕಾಗಿ ಪರಿಣಮಿಸಿದೆ.

Advertisement

ಪ್ಲಾಸ್ಟಿಕ್‌ ನಿಷೇಧ ಯಾವಾಗ: ಕರ್ನಾಟಕ ರಾಜ್ಯಾದ್ಯಂತ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿಗಳು 2017ರ ಜು.11ರ ಆದೇಶದಂತೆ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿ ಸಿದ್ದಾರೆ. ಈ ಆದೇಶದನ್ವಯ ಧಾರ್ಮಿಕ ಪುಣ್ಯಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲೂ ಪ್ಲಾಸ್ಟಿಕ್‌ ನಿಷೇಧ ಮಾಡುವುದು ಸೂಕ್ತ ಎಂಬುದನ್ನು ಮನಗಂಡು 2022ರ ಫೆ.18ರಂದು ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ಲಾಸ್ಟಿಕ್‌ ನಿಷೇಧಕ್ಕೆ ಕೈಗೊಂಡಿರುವ ಕ್ರಮಗಳು: ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಸೂರಪನೇನಿ ವಿದ್ಯಾಸಾಗರ್‌ ಫೌಂಡೇಷನ್‌ಯಿಂದ ಹತ್ತು ಹಲವು ಯೋಜನೆಗಳನ್ನಯ ಕೈಗೆತ್ತಿ ಕೊಳ್ಳಲಾಗಿದೆ. ಈಗಾಗಲೇ ಕೌದಳ್ಳಿಯಿಂದ ಮಲೆ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಲು 5-6 ಬಾರಿ ಶ್ರಮದಾನ ಕೈಗೊಳ್ಳಲಾಗಿದ್ದು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ. ತಿರುಪತಿ ಮಾದರಿಯಲ್ಲಿ ಪ್ಲಾಸ್ಟಿಕ್‌ ಮುಕ್ತ ಮಹದೇಶ್ವರಬೆಟ್ಟ ನಿರ್ಮಾಣಕ್ಕಾಗಿ 2021ರ ಡಿ.21ರಂದು ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಅಧ್ಯಯನ ನಡೆಸಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಹಿಂದಿರುಗಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ಬೊಂಬೆ ಮತ್ತು ಆಟಿಕೆಗಳ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿನ ವ್ಯಾಪಾರಿ ಮಹಿಳೆಯರಿಗೆ ಸ್ಥಳೀಯವಾಗಿ ದೊರೆಯುವ ಮರ ಮತ್ತು ಬಿದಿರಿನಿಂದ ಬೊಂಬೆ ತಯಾರಿಸಿ ಮಾರಾಟ ಮಾಡಲು 1 ದಿನದ ತರಬೇತಿ ಕಾರ್ಯಾಗಾರವನ್ನೂ ಸಹ ನೀಡಲಾಗಿದೆ.

ಮ.ಬೆಟ್ಟದಲ್ಲಿ ಶೂನ್ಯ ತ್ಯಾಜ್ಯ ಘಟಕ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗಾಗಲೇ ಶೂನ್ಯ ಪ್ಲಾಸ್ಟಿಕ್‌ ತ್ಯಾಜ್ಯ ಘಟಕವನ್ನು ತೆರೆಯಲಾಗಿದ್ದು, ಈ ಘಟಕದಲ್ಲಿ ನೀರಿನ ಬಾಟಲ್‌ ಗಳನ್ನು 3 ಹಂತಗಳಲ್ಲಿ ವಿಂಗಡಿಸಿ ಮುಚ್ಚಳ, ರಿಂಗ್‌ ಮತ್ತು ಬಾಟಲಿಗಳ ಮೇಲಿನ ಲೇಬಲ್‌ಗ‌ಳನ್ನು ಪ್ರತ್ಯೇಕಪಡಿಸಿ ಕಾಂಪ್ಯಾಕ್ಟರ್‌ ಯಂತ್ರದ ಮೂಲಕ ಅದನ್ನು ಬೇಲ್‌ ಮಾಡಿ 20 ಕೆ.ಜಿ ತೂಕದ ಬಂಡಲ್‌ಗ‌ಳನ್ನಾಗಿ ಮಾಡಿ ಮರುಬಳಕೆಗೆ ಮಾರಾಟ ಮಾಡಲು ಕ್ರಮವಹಿಸಲಾಗಿದೆ.

ಮಲೆ ಮಹದೇಶ್ವರ ಪ್ರಾಧಿಕಾರದ ಮುಂದಿರುವ ಹಲವು ಯೋಜನೆಗಳು : ಪ್ರಾಧಿಕಾರದ ಅಧಿಕಾರಿಗಳ ಮಾಹಿತಿ ಪ್ರಕಾರ ಶ್ರೀ ಕ್ಷೇತ್ರದಲ್ಲಿ ನೀರಿನ ಬಾಟಲಿ ಗಳಿಂದಲೇ ಶೇ.90ರಷ್ಟು ತ್ಯಾಜ್ಯ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಾಟಲಿ ಗಳ ಬಳಕೆಯನ್ನು ನಿಷೇಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ. ಮಹದೇಶ್ವರಬೆಟ್ಟಲ್ಲಿ ತಿರುಪತಿ ಮಾದರಿಯ ಲ್ಲಿಯೇ 500 ಮಿಲಿ, 1 ಲೀಟರ್‌ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ 70 ರೂ.ಗೆ ಒಂದು ಗಾಜಿನ ಬಾಟಲಿ ಯನ್ನು ನೀಡಿ ಆ ಬಾಟಲಿಯನ್ನು ಪಡೆದು ಶ್ರೀ ಕ್ಷೇತ್ರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಹಿಡಿದು ಉಪಯೋಗಿಸುವುದು. ಬಳಿಕ ಅವರು ಶ್ರೀ ಕ್ಷೇತ್ರದಿಂದ ಹಿಂದಿರು ಗುವಾಗ ಅವರಿಗೆ ಬಾಟಲು ಅವಶ್ಯಕತೆಯಿದ್ದಲ್ಲಿ ಅವರೆ ಕೊಂಡೊಯ್ಯುವುದು ಇಲ್ಲವಾದಲ್ಲಿ ಶ್ರೀ ಕ್ಷೇತ್ರದ ಯಾವುದೇ ಅಂಗಡಿಯಲ್ಲಿ ಆ ಬಾಟಲಿಯನ್ನು ಹಿಂದಿರುಗಿಸಿ 40 ರೂ. ವಾಪಸ್‌ ಪಡೆದುಕೊಳ್ಳಬಹುದಾದಂತಹ ಯೋಜನೆಯನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಯೋಜನೆಯನ್ನು ಮುಂದಿನ ಒಂಡೆರೆಡು ತಿಂಗಳಲ್ಲಿ ಪ್ರಾರಂಭಿಸಲು ಪ್ರಾಧಿಕಾರದ ಅಧಿಕಾರಿಗಳು ಸಿದ್ಧತಾ ಕಾರ್ಯಗಳಲ್ಲಿ ತೊಡಗಿದ್ದಾರೆ. ಒಟ್ಟಾರೆ ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಲವು ಯೋಜನೆಗಳನ್ನು ಕೈಗೊಂಡಿದ್ದು ಈ ಯೋಜನೆಗಳೆಲ್ಲಾ ಕಾರ್ಯಗತ ಗೊಂಡು ತಿರುಪತಿ ಮತ್ತು ಧರ್ಮಸ್ಥಳ ಮಾದರಿಯಲ್ಲಿ ಪ್ಲಾಸ್ಟಿಕ್‌ ಮುಕ್ತ ಕ್ಷೇತ್ರ ಮತ್ತು ಸ್ವತ್ಛ ಪುಣ್ಯಕ್ಷೇತ್ರವಾಗ ಬೇಕೆನ್ನುವುದು ಪರಿಸರ ಪ್ರೇಮಿಗಳು ಮತ್ತು ಮಾದಪ್ಪನ ಭಕ್ತರ ಹಂಬಲವಾಗಿದೆ.

Advertisement

ಪ್ಲಾಸ್ಟಿಕ್‌ ತಡೆಗೆ ಹಲವು ಕ್ರಮ : ಶ್ರೀ ಕ್ಷೇತ್ರದ ಮಾರ್ಗಮಧ್ಯದಲ್ಲಿ ಬರುವ ಮಲೆ ಮಹದೇಶ್ವರ ವನ್ಯಜೀವಿಯ ಅರಣ್ಯ ಮತ್ತು ವನ್ಯಜೀವಿ ಗಳಿಗೂ ಪ್ಲಾಸ್ಟಿಕ್‌ ವಿವಿಧ ಆಯಾಮಗಳಲ್ಲಿ ಮಾರಕವಾಗುತ್ತಿದೆ. ಈ ಭಾಗದ ಹಸುಗಳು ಮತ್ತು ವನ್ಯಜೀವಿಗಳೂ ಸಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮೃತಪಟ್ಟ ವನ್ಯಜೀವಿಗಳ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ 15-20 ಕೆ.ಜಿ ಪ್ಲಾಸ್ಟಿಕ್‌ ಸಂಗ್ರಹಣೆಯಾಗಿರುವ ಉದಾಹರಣೆಗಳೂ ಇವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಹಲವು ಯೋಜನೆಗಳನ್ನು ಕೈಗೆತ್ತಕೊಳ್ಳಲು ಸಿದ್ಧತೆ ಕೈಗೊಂಡಿದೆ. ಮೊದಲ ಹಂತದಲ್ಲಿ ಕೌದಳ್ಳಿಯಿಂದ ತಾಳಬೆಟ್ಟದ ವರೆಗೆ 15 ಕಡೆಗಳಲ್ಲಿ ತಲಾ 2 ಸಾವಿರ ಲೀಟರ್‌ ಸಾಮರ್ಥ್ಯದ 15 ಸಮುದಾಯ ನೀರಿನ ಘಟಕಗಳನ್ನು ತೆರೆಯಲು ಯೋಜನೆ ಕೈಗೆತ್ತಿಕೊಂಡಿದೆ. ಇದರ ಜೊತೆಗೆ ಕೌದಳ್ಳಿ ಪ್ರವೇಶ ದ್ವಾರದಲ್ಲಿಯೇ ಚೆಕ್‌ಪೋಸ್ಟ್‌ ತೆರೆದು ಬಟ್ಟೆಬ್ಯಾಗ್‌ಗಳ ವಿತರಣೆ, ಬಿದಿರಿನ ನೀರಿನ ಬಾಟಲ್‌ಗ‌ಳು ಮತ್ತು ಬಟ್ಟೆಯ ನೀರಿನ ಬಾಟಲಿಗಳನ್ನು ವಿತರಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.

ಸ್ವಯಂಸೇವಾ ಸಂಸ್ಥೆಯಿಂದಲೂ ಸಾಥ್‌: ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲು ಬೆಂಗಳೂರಿನ ಸೂರಪನೇನಿ ವಿದ್ಯಾಸಾಗರ್‌ ಫೌಂಡೇಷನ್‌ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಬೊಂಬೆ ಮಾರಾಟ ಮತ್ತು ಆಟಿಕೆ ಮಾರಾಟಗಾರರನ್ನು ಚನ್ನಪಟ್ಟಣ ಕ್ರಾಫ್ಟ್ ಗೆ ಕರೆದೊಯ್ದು ಅಲ್ಲಿ ಪ್ಲಾಸ್ಟಿಕ್‌ ಬಳಕೆಯಿಲ್ಲದೆ ಆಟಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದರ ಬಗ್ಗೆ, ಮರದ ಬೊಂಬೆ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಮಹದೇಶ್ವರ ಬೆಟ್ಟದಲ್ಲಿನ ಮಹಿಳೆಯರಿಗೆ ಬಟ್ಟೆ ಬ್ಯಾಗ್‌ ಗಳನ್ನು ತಯಾರಿಕೆ ಬಗ್ಗೆ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ಧರ್ಮಸ್ಥಳದ ರುಡ್‌ಸೆಟ್‌ ಸಂಸ್ಥೆಯ ಸಹಯೋಗದೊಂದಗೆ ಸ್ವಾವಲಂಬಿ ಮತ್ತು ಚಿಂತಬ ಕಾರ್ಯಕ್ರಮಗಳನ್ನು ನೀಡಿ ಸ್ಕಿಲ್‌ ಇಂಡಿಯಾ ಯೋಜನೆಯಡಿ ಶ್ರೀ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿ ಸಿದ್ದು, ಈಗಾಗಲೇ ಸ್ಥಳೀಯ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆಯನ್ನೂ ಸಹ ಬರೆಸಿಕೊಳ್ಳಲಾಗಿದೆ. ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದ್ದು ಮೊದಲ ಹಂತದಲ್ಲಿ ಮುಂದಿನ 1 ತಿಂಗಳೊಳಗಾಗಿ ಗಾಜಿನ ಬಾಟಲಿಗಳ ಘಟಕ ತೆರೆಯಲು ಕ್ರಮವಹಿಸಲಾಗಿದೆ. – ಜಯವಿಭವಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ

ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಮತ್ತು ಸ್ವತ್ಛ ಪುಣ್ಯಕ್ಷೇತ್ರವನ್ನಾಗಿಸಲು ಸ್ಥಳೀಯ ಜನರ ಮನಸ್ಥಿತಿ ಬದಲಾಗಬೇಕು, ಮೊದಲಿಗೆ ಇಲ್ಲಿನ ವ್ಯಾಪಾರಸ್ಥರು ದುರಾಸೆಬಿಟ್ಟು ಕಡಿಮೆ ಲಾಭ ಸಿಕ್ಕರೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂಬುವ ಮಣೋಭಾವ ಬೆಳೆಯ ಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರದ ಅಧಿಕಾರಗಳು ಅವರಿಗೆ ನೋಟಿಸ್‌ ನೀಡಲು ಮತ್ತು ದಂಡ ಪ್ರಯೋಗ ಮಾಡಲು ಮುಂದಾಗಬೇಕು. -ವಿದ್ಯಾಸಾಗರ್‌, ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ.

 

-ವಿನೋದ್‌ ಎನ್‌ ಗೌಡ

Advertisement

Udayavani is now on Telegram. Click here to join our channel and stay updated with the latest news.

Next