ಹೊಸದಿಲ್ಲಿ: ಈ ವರ್ಷ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯ ಬೇಕಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಯಾವುದೇ ಚಿಂತನೆ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸ್ಪಷ್ಟನೆ ನೀಡಿದ್ದಾರೆ.
‘ದ ಇಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಚುನಾವಣೆ ನಡೆಸುವುದರ ಬಗ್ಗೆ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದರು.
ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ ನೀಡುವ ಸೂಚನೆಯ ಅನ್ವಯ ಚುನಾವಣೆ ನಡೆಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಲಿದೆ.
ಸ್ಯಾನಿಟೈಸರ್ ಬಳಕೆ, ಮಾಸ್ಕ್, ಗ್ಲೌಸ್ ಧರಿಸುವುದು ಸೇರಿದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಅರೋರಾ.
65 ವರ್ಷ ಹಿರಿಯ ನಾಗರಿಕರು ಮತ್ತು ಇತರ ಅಶಕ್ತರಿಗೆ ಅಂಚೆ ಮೂಲಕ ಮತ ಹಾಕಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಾನೂನು ಹಾಗೂ ನ್ಯಾಯ ಸಚಿವಾಲಯಕ್ಕೆ ಆಯೋಗವು ಈಗಾಗಲೇ ಶಿಫಾರಸು ಸಲ್ಲಿಸಿದೆ.
ಮಧ್ಯಪ್ರದೇಶದಲ್ಲಿನ 24 ಕ್ಷೇತ್ರಗಳು ಸೇರಿದಂತೆ ದೇಶದಲ್ಲಿ ನಡೆಯಬೇಕಾಗಿರುವ ಉಪ ಚುನಾವಣೆಯನ್ನು ಸೂಕ್ತ ಸಮಯದಲ್ಲಿ ನಡೆಸಲಾಗುತ್ತದೆ ಎಂದರು.