Advertisement

ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕ್ ಇಲ್ಲ: ಸಚಿವ ರವಿಶಂಕರ್ ಪ್ರಸಾದ್

10:09 AM Nov 21, 2019 | Hari Prasad |

ನವದೆಹಲಿ: ಸಾಮಾಜಿಕ ಜಾಲತಾಣ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬುಧವಾರದಂದು ಖಚಿತಪಡಿಸಿದ್ದಾರೆ. ಈ ಕುರಿತಾಗಿ ಸಂಸತ್ತಿಗೆ ಲಿಖಿತ ಹೇಳಿಕೆಯನ್ನು ನೀಡಿರುವ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಆಧಾರ್ ಮಾಹಿತಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಇವುಗಳನ್ನು ಆಗಾಗ ಆಡಿಟ್ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಸಹ ಸಚಿವರು ಸಂಸತ್ತಿಗೆ ಮನವರಿಕೆ ಮಾಡಿಕೊಟ್ಟರು.

Advertisement

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಗಳನ್ನು ಬ್ಲಾಕ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಪ್ರಸಾದ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ದ ಸೆಕ್ಷನ್ 69ಎ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣ ಖಾತೆಗಳನ್ನು ಬ್ಲಾಕ್ ಮಾಡುವ ಹಕ್ಕು ಸರಕಾರಕ್ಕಿದೆ ಎಂದು ಹೇಳಿದರು.

ಕೇಂದ್ರ ಸರಕಾರ 2016 ರಿಂದ 2019ರವರೆಗೆ ಬ್ಲಾಕ್ ಮಾಡಿರುವ ವೆಬ್ ಸೈಟ್ ಯು.ಆರ್.ಎಲ್.ಗಳ ಸಂಖ್ಯೆಯನ್ನೂ ಸಹ ಸಚಿವರು ಇದೇ ಸಂದರ್ಭದಲ್ಲಿ ಸದನಕ್ಕೆ ನೀಡಿದರು. 2016ರಲ್ಲಿ 633, 2017ರಲ್ಲಿ 1385, 2018ರಲ್ಲಿ 2799 ಮತ್ತು 2019ರಲ್ಲಿ 3433 ವೆಬ್ ಸೈಟ್ ಯು.ಆರ್.ಎಲ್.ಗಳನ್ನು ಬ್ಲಾಕ್ ಮಾಡಲಾಗಿದೆ ಎಂಬ ಮಾಹಿತಿ ಸಚಿವರಿಂದ ಲಭ್ಯವಾಗಿದೆ.

ಇನ್ನು ಇಸ್ರೇಲ್ ಮೂಲದ ಪೆಗಾಸಸ್ ವಾಟ್ಸ್ಯಾಪ್ ಮೂಲಕ ಮಾಹಿತಿ ಕನ್ನ ಹಾಕಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಅಸಾವುದ್ದೀನ್ ಒವೈಸಿ ಅವರು ಸಚಿವರ ಬಳಿ ಮಾಹಿತಿ ಕೇಳಿದಾಗ ಇದಕ್ಕೆ ಉತ್ತರಿಸಿದ ರವಿಶಂಕರ್ ಪ್ರಸಾದ್ ಅವರು, ಭಾರತದಲ್ಲಿ 121 ಜನರ ವಾಟ್ಸ್ಯಾಪ್ ಮೇಲೆ ಸ್ಪೈವೇರ್ ದಾಳಿಯ ಪ್ರಯತ್ನ ನಡೆದಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಮಾತ್ರವಲ್ಲದೇ ದೇಶದ ನಾಗರಿಕರ ಖಾಸಗಿತನವನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಸದನಕ್ಕೆ ಭರವಸೆ ನೀಡಿದರು. ಮಾತ್ರವಲ್ಲದೇ ಪೆಗಾಸಸ್ ಸ್ಪೈವೇರ್ ಮಾಹಿತಿ ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ವಾಟ್ಸ್ಯಾಪ್ ಸಂಸ್ಥೆಯಿಂದ ವಿವರಣೆಯನ್ನು ಬಯಸಿ ನೊಟೀಸ್ ಸಹ ಜಾರಿಮಾಡಿದೆ ಎಂದವರು ಸದನಕ್ಕೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next