ಹೊಸದಿಲ್ಲಿ: ದೇಶಕ್ಕಾಗಿ ಅಮೋಘ ಸೇವೆ ಸಲ್ಲಿಸಿದ ಕ್ರಿಕೆಟಿಗರಿಗೆ ವಿದಾಯ ಪಂದ್ಯ ಏರ್ಪಡಿಸಿ ಅವರಿಗೊಂದು ಗೌರವಯುತ ಬೀಳ್ಕೊಡುಗೆ ನೀಡುವ ಪರಿಪಾಠ ಬಿಸಿಸಿಐಯಲ್ಲಿ ಇಲ್ಲದಿರುವುದೊಂದು ವಿಪರ್ಯಾಸ.
ಧೋನಿ ಕೂಡ ಈ ಗೌರವದಿಂದ ವಂಚಿತರಾಗುತ್ತಿದ್ದಾರೆ.
ಭಾರತದ ಪರ ಕೊನೆಯ ಪಂದ್ಯವನ್ನಾಡಿ ಒಂದು ವರ್ಷದ ಬಳಿಕ ಧೋನಿ ನಿವೃತ್ತಿ ಘೋಷಿಸಿದ್ದು, ಅವರಿಗೆ ವಿದಾಯ ಪಂದ್ಯ ಏರ್ಪಡಿಸುವ ಯಾವುದೇ ಸಾಧ್ಯತೆ ಇಲ್ಲ ಎಂಬುದಾಗಿ ಐಪಿಎಲ್ ಮಾಜಿ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
‘ಧೋನಿ ಬಿಸಿಸಿಐ ಮುಂದೆ ವಿದಾಯ ಪಂದ್ಯದ ಬಯಕೆ ವ್ಯಕ್ತಪಡಿಸಿಲ್ಲ. ಹೀಗಾಗಿ ಇಂಥದೊಂದು ಪಂದ್ಯದ ಸಾಧ್ಯತೆ ಇಲ್ಲ’ ಎಂಬುದಾಗಿ ಶುಕ್ಲ ಮಾಧ್ಯಮವರಲ್ಲಿ ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಆಡಿದ ಖ್ಯಾತ ಕ್ರಿಕೆಟಿಗರಲ್ಲಿ ವಿದಾಯ ಪಂದ್ಯದ ಗೌರವ ಪಡೆದದ್ದು ಸಚಿನ್ ತೆಂಡುಲ್ಕರ್ ಮಾತ್ರ. ಆದರೆ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ ಮೊದಲಾದ ಸಾಧಕರಿಗೆ ಈ ಯೋಗ ಇರಲಿಲ್ಲ. ಇದೀಗ ಧೋನಿ ಸರದಿ!
ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ: ಧೋನಿಗೆ ಐಸಿಸಿ ಅಭಿನಂದನೆ
ವಿದಾಯ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ ಅವರನ್ನು ‘ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ’ ಎಂದು ಐಸಿಸಿ ಅಭಿನಂದಿಸಿದೆ. ‘ಧೋನಿ ವಿಶ್ವ ಕ್ರಿಕೆಟಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 2011ರ ವಿಶ್ವಕಪ್ ಫೈನಲ್‌ನಲ್ಲಿ ಅವರು ಗೆಲುವಿನ ಹೊಡೆತ ಬಾರಿಸಿದ ಆ ಒಂದು ದೃಶ್ಯ ಅಭಿಮಾನಿಗಳಲ್ಲಿ ಅಚ್ಚಳಿಯದೇ ಉಳಿದಿದೆ.
ಒಂದು ಕಾಲಘಟ್ಟದ ಇಡೀ ಪೀಳಿಗೆಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವರ ಅಸಾಮಾನ್ಯ ಕ್ರಿಕೆಟ್ ಜೀವನಕ್ಕೆ ಅಭಿನಂದಿಸುತ್ತ, ಐಸಿಸಿ ಪರವಾಗಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತಿದ್ದೇನೆ’ ಎಂಬುದಾಗಿ ಐಸಿಸಿ ಸಿಎಒ ಮನು ಸಾಹ್ನಿ ಹೇಳಿದ್ದಾರೆ.