ಮೆಲ್ಬೋರ್ನ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ, ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ತನ್ನ ಸಾರ್ವಕಾಲಿಕ ಐಪಿಎಲ್ ತಂಡವೊಂದನ್ನು ನೇಮಿಸಿದ್ದಾರೆ. ವಿಶೇಷವೆಂದರೆ ಅದರಲ್ಲಿ ಯುವರಾಜ್ ಸಿಂಗ್, ಶೇನ್ ವಾಟ್ಸನ್, ಲಸಿತ್ ಮಾಲಿಂಗರಂತಹ ದಿಗ್ಗಜರೇ ಸ್ಥಾನ ಪಡೆದಿಲ್ಲ.
ಖ್ಯಾತ ಕಮೆಂಟೇಟರ್ ಹರ್ಷ ಭೋಗ್ಲೆ ಜೊತೆಗೆ ನಡೆಸಿದ ಸಂದರ್ಶನದಲ್ಲಿ ವಾರ್ನರ್ ತನ್ನ ತಂಡ ಪ್ರಕಟಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಜೊತೆಗೆ ಸ್ವತಃ ತಾನೇ ( ವಾರ್ನರ್) ಆರಂಭಿಕ ಸ್ಥಾನ ತುಂಬಿದ್ದಾರೆ.
ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಆಡಿದರೆ, ಚೆನ್ನೈ ತಂಡದ ಸುರೇಶ್ ರೈನಾ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ಬಿಗ್ ಹಿಟ್ಟರ್ ಗಳಿಗೆ ವಾರ್ನರ್ ಸ್ಥಾನ ನೀಡಿದ್ದಾರೆ. ಅವರೆಂದರೆ ಹಾರ್ದಿಕ್ ಪಾಂಡ್ಯ ಮತ್ತು ಗ್ಲೆನ್ ಮ್ಯಾಕ್ಸವೆಲ್.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಲಿದ್ದಾರೆ. ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಧೋನಿಯ ಹೆಗಲೇರಿದೆ.
ವೇಗದ ಬೌಲಿಂಗ್ ಗೆ ಆಸೀಸ್ ನ ಮಿಚೆಲ್ ಸ್ಟಾರ್ಕ್, ಜಸ್ಪ್ರೀತ್ ಬುಮ್ರಾ ಮತ್ತು ಆಶೀಶ್ ನೆಹ್ರಾ ಆಯ್ಕೆಯಾಗಿದ್ದಾರೆ. ಸ್ಪಿನ್ನರ್ ಗಳಲ್ಲಿ ಕುಲದೀಪ್ ಯಾದವ್ ಮತ್ತು ಚಾಹಲ್ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗುತ್ತಾರೆ ಎಂದು ವಾರ್ನರ್ ಹೇಳಿದ್ದಾರೆ.