ಮುಳಬಾಗಿಲು: 10 ವರ್ಷ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಬಾರದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು, ರಾಜಕೀಯ ಸಂಘಟನೆಯಲ್ಲಿ ತೊಡಗಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘವು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್‌ಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,ದೇಶ ಆರ್ಥಿಕವಾಗಿ ಮುಂದುವರಿಯಬೇಕಾದರೆಶಿಕ್ಷಣ ಪ್ರಮುಖ ಪಾತ್ರ ವಹಿಸುವುದರಿಂದ ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸಬೇಕಿದೆ. ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು. ಆಗ ಅವನ ಜೀವನ ಉತ್ತಮ ರೀತಿಯಲ್ಲಿರೂಪಿಸಬಹುದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ಕನಸು ಕನಸಾಗೇ ಉಳಿದಿದೆ ಎಂದು ಹೇಳಿದರು. ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕೆಂಬ ಕನಸು ಈಡೇರುವ ಲಕ್ಷಣಗಳಿಲ್ಲ. ಖಾಸಗಿ ಶಾಲೆಗಳು ಕಾರ್ಪೊರೇಟ್ ಕಂಪನಿ ಮಾಲಿಕರಿಗೆ ಚಿನ್ನದ ಮೊಟ್ಟೆ ಇಡುವ ಶಾಲೆಗಳಾಗಿವೆ ಎಂದು ಆರೋಪಿಸಿದರು.
ರಾಜಕೀಯ, ವಿವಿಧ ಸಂಘಟನೆ ಹಾಗೂ ತಮ್ಮ ವ್ಯಾಪ್ತಿಗೆ ಒಳಪಡದ ಕೆಲಸಗಳಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುತ್ತಿರುವ ಕಾರಣ ಪಾಠ ಪ್ರವಚನಗಳು ನಡೆಯದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಅಧಿಕಾರಿಗಳ ತಂಡರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿ, ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸಬೇಕಾದ ಶಿಕ್ಷಕರು ಬಡ್ಡಿ ವ್ಯವಹಾರ, ರಾಜಕೀಯ, ಸಂಘಟನೆಗಳಲ್ಲಿ ತೊಡಗಿಕೊಂಡು, ಕ್ಷೇತ್ರಕ್ಕೆ ದ್ರೋಹಬಗೆಯುತ್ತಿದ್ದಾರೆ ಎಂದು ದೂರಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ನಾಗೇಶ್, ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಲು ಸರ್ಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಅದರ ಜೊತೆಗೆ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಲು ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. ಆದರೂ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಅದರ ಜೊತೆಗೆ ಶಿಕ್ಷಕರು ರಾಜಕೀಯ ಸಂಘಟನೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಸಂಬಂಧಪಟ್ಟಂತೆ ಉಪ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಜುನಾಥ್, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ಜುಬೇರ್ ಪಾಷ, ರಾಜೇಶ್‌ಕಲೆ, ಹೆಬ್ಬಣಿ ಆನಂದೆಡ್ಡಿ, ಯಲುವಹಳ್ಳಿ ಪ್ರಭಾಕರ್, ನಲ್ಲಂಡಹಳ್ಳಿ ಕೇಶವ, ಪೊಂಬರಹಳ್ಳಿ ನವೀನ್, ವೇಣು, ಸಾಗರ್, ನವೀನ್ ಅಮರ್‌ನಾಥ್, ರೆಹಮಾನ್ ಮಂಜುನಾಥರೆಡ್ಡಿ, ರಾಮಸ್ವಾಮಿ ಚಂದ್ರಪ್ಪ, ಪುತ್ತೇರಿ ರಾಜು ಇದ್ದರು.