ಬೆಳಗಾವಿ: ವಿಧಾನ ಮಂಡಲ ಚಳಿಗಾಲ ಅಧಿವೇಶನದಂದು ಕರ್ನಾಟಕ ಸರ್ಕಾರಕ್ಕೆ ಸಡ್ಡು ಹೊಡೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮರಾಠಿ ಮಹಾಮೇಳಾವಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಇಂದು ನಡೆಯಬೇಕಿದ್ದ ಮಹಾಮೇಳಾವ ರದ್ದುಗೊಂಡಿದೆ.
ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಮೇಳಾವ್ ವೇದಿಕೆಯನ್ನು ತೆರವುಗೊಳಿಸಲಾಯಿತು. ಎಡಿಜಿಪಿ ಅಲೋಕ ಕುಮಾರ್ ಹಾಗೂ ಬೆಳಗಾವಿ ನಗರ ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಭೇಟಿ ನೀಡಿ ವೇದಿಕೆಯನ್ನು ತೆರವುಗೊಳಿಸಿದರು. ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ತಾಕೀತು ಮಾಡಿದರು.
ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ಕಲಾಂ 144 ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಹೀಗಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವಕ್ಕೆ ಬ್ರೇಕ್ ಬಿದ್ದಂತಾಗಿದೆ.
ಇದನ್ನೂ ಓದಿ:ಟ್ವಿಟರ್‌ನಿಂದ ನಾನು ಕೆಳಗೆ ಇಳಿಯಬೇಕೇ..? ಜನರ ಆಯ್ಕೆಗೆ ಬದ್ದನೆಂದು ಪ್ರಶ್ನೆ ಕೇಳಿದ ಎಲಾನ್ ಮಸ್ಕ್
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಮರಾಠಿ ಮೇಳ ಆಯೋಜಿಸಲು ನಿರ್ಧರಿಸಿದ್ದರು. ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ತಡೆಯಲು ಈ ಮೇಳಾವಕ್ಕೆ ಅನುಮತಿ ನಿರಾಕರಿಸಲಾಗಿದೆ. ಅನುಮತಿ ಕೋರಿ ಎಂಇಎಸ್ ಮುಖಂಡರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಒಂದು ವೇಳೆ ಬೆಳಗಾವಿಯಲ್ಲಿ ಯಾವುದಾದರೂ ಮೆಳಾವ್ ನಡೆಸಿದರೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು