Advertisement

ಆಸ್ಪತ್ರೆಗಿಲ್ಲ ಕಾಯಂ ವೈದ್ಯರು!

10:08 AM Jan 10, 2019 | Team Udayavani |

ಗಜೇಂದ್ರಗಡ: ಸುಸಜ್ಜಿತ ಕಟ್ಟಡ, ಕೊಠಡಿ, ಹಾಸಿಗೆ, ಅಗತ್ಯ ಔಷಧ ಸಾಮಗ್ರಿಗಳಿವೆ. ನಿತ್ಯ ನೂರಾರು ರೋಗಿಗಳ ಬರುತ್ತಾರೆ. ಅಪಘಾತ ಪ್ರಕರಣ ನಿತ್ಯ ದಾಖಲಾಗುತ್ತಲೇ ಇರುತ್ತದೆ. ಆದರೆ ಹಲವು ವರ್ಷಗಳಿಂದ ತಜ್ಞ ಹಾಗೂ ಹಿರಿಯ ಕಾಯಂ ವೈದ್ಯರ ಕೊರತೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಬಳಲುತ್ತಿದ್ದರೂ, ಸಹ ಕಾಯಂ ವೈದ್ಯರ ನೇಮಕಕ್ಕೆ ಸರ್ಕಾರ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಜಿಲ್ಲೆಯಲ್ಲಿ ತೀವ್ರಗತಿ ಬೆಳೆಯುತ್ತಿರುವ ಹಾಗೂ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣಕ್ಕೆ ಸುತ್ತಲಿನ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಹಲವು ಗ್ರಾಮಗಳ ರೋಗಿಗಳಿಗೆ ಗಜೇಂದ್ರಗಡ ಸರಕಾರಿ ಆಸ್ಪತ್ರೆ ಮುಖ್ಯ ಕೇಂದ್ರವಾಗಿದೆ. ಚಿಕಿತ್ಸೆ, ಹೆರಿಗೆಗಾಗಿ ಬರುವವರೇ ಹೆಚ್ಚು. ಹೀಗಿರುವಾಗ ಸ್ತ್ರೀ ರೋಗ ತಜ್ಞ ಮತ್ತು ಹಿರಿಯ ವೈದ್ಯರ ಕೊರತೆಯಿಂದ ಮಹಿಳೆಯರು ಪರದಾಡುವಂತಾಗಿದೆ.

ಸರಕಾರಿ ಆಸ್ಪತ್ರೆ ಹಾಗೂ ತುರ್ತು ಚಿಕತ್ಸಾ ಘಟಕ ಕಟ್ಟಡ ನೋಡಲು ವಿಶಾಲವಾಗಿದೆ. ಸರಕಾರ ಬಡ ಜನರಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಿಂದ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ ತಜ್ಞ ವೈದ್ಯರ ಕೊರತೆಯಿಂದಾಗಿ ಇಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚಿಕಿತ್ಸೆ ಸಿಗದಂತಾಗಿದೆ ಎಂಬುದಕ್ಕೆ ಈ ಸರಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ.

ರೋಗಿಗಳ ಪರದಾಟ: 30 ಹಾಸಿಗೆಯ ಸರ್ಕಾರ ಆಸ್ಪತ್ರೆಗೆ ನಿತ್ಯ ನೂರಾರು ಹೊರ ರೋಗಿಗಳು ಬರುತ್ತಾರೆ. ಜೊತೆಗೆ ನಿತ್ಯ ಒಂದಿಲ್ಲೊಂದು ಅಪಘಾತ ಪ್ರಕರಣಗಳು ಸೇರಿ ತುರ್ತು ಚಿಕಿತ್ಸಾ ಪ್ರಕರಣಗಳು ಇಲ್ಲಿ ಮಾಮೂಲು. ಆಸ್ಪತ್ರೆಯಲ್ಲಿ ಕಾಯಂ ವೈದ್ಯರ ಕೊರತೆ ದಟ್ಟವಾಗಿ ಕಾಡುತ್ತಿದೆ. ಹೀಗಾಗಿ ಪ್ರಭಾರಿ ವೈದ್ಯರೇ ಇಲ್ಲಿ, ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸ್ಪತ್ರೆಗಿಲ್ಲ ಕಾಯಂ ವೈದ್ಯರು: ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ 30 ಸಿಬ್ಬಂದಿ ಅವಶ್ಯಕತೆ ಇದೆ. ಆದರೆ 1 ದಂತ ವೈದ್ಯ, 1 ದ್ವಿತೀಯ ದರ್ಜೆ ಸಹಾಯಕ, 3 ಶುಶ್ರೂಷಕರು, 1 ಫಾರ್ಮಸಿಸ್ಟ್‌, 1 ಕ್ಷ-ಕಿರಣ ತಂತ್ರಜ್ಞರು, 1 ಕಿ.ಪ್ರ. ಶಾಲಾ ತಂತ್ರಜ್ಞರು, 1 ವಾಹನ ಚಾಲಕ, 5 ಡಿ ದರ್ಜೆ ನೌಕರರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಪ್ರಮುಖ ಹುದ್ದೆಗಳಾದ ಹಿರಿಯ ವೈದ್ಯಾಧಿಕಾರಿ, ಚಿಕ್ಕ ಮಕ್ಕಳ ತಜ್ಞ ವೈದ್ಯರು, ಅರವಳಿಕೆ ತಜ್ಞರು, ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರ ಕೊರತೆಯಿದೆ.

Advertisement

ಆಸ್ಪತ್ರೆಗೆ ಕನಿಷ್ಠ 5 ತಜ್ಞ ವೈದ್ಯರ ಅವಶ್ಯಕತೆ ಇದೆ. ಆದರೆ ಕಾಯಂ ವೈದ್ಯರು ಇಲ್ಲದಿರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸ ದೊರೆಯದೆ ಪರದಾಡುವಂತಾಗಿದೆ. ಒಳ ರೋಗಿಗಳಿಗೆ, ಹೊರ ರೋಗಿಗಳಿಗೆ ಶುಶ್ರೂಷ ಮಾಡುವುದರ ಜೊತೆಗೆ ಅಪಘಾತ ಪ್ರಕರಣ ಮರಣೋತ್ತರ ಪರೀಕ್ಷೆಗೂ ಆಸ್ಪತ್ರೆ ವೈದ್ಯಾಧಿಕಾರಿಯೇ ಕಾರ್ಯ ನಿರ್ವಹಿಸ ಬೇಕಾಗಿರುವುದರಿಂದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಮಸ್ಯೆಯಿಂದಾಗಿ ರೋಗಿಗಳು ಪಡಬಾರದ ಕಷ್ಟ ಪಡುತ್ತಿದ್ದಾರೆ.

ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಗೆ ಕಳೆದ 8 ವರ್ಷಗಳಿಂದ ಕಾಯಂ ಹಿರಿಯ ಮತ್ತು ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡದಿರುವುದು ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆಯ ಜನಪರ ಕಾಳಜಿ ತೋರಿಸುತ್ತದೆ. ಶೀಘ್ರದಲ್ಲೇ ತಜ್ಞ ವೈದ್ಯರ ನೇಮಕಕ್ಕೆ ಮುಂದಾಗಬೇಕು. 
ಎಂ.ಎಸ್‌ ಹಡಪದ ಸಿಪಿಐ(ಎಂ) ಮುಖಂಡ.

ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸುವ ಕುರಿತು ಈಗಾಗಲೇ ಶಾಸಕರು ಸಹ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ತಜ್ಞ ಮತ್ತು ಹಿರಿಯ ವೈದ್ಯರ ನೇಮಕ ಮಾಡುವುದರ ಜೊತೆಗೆ ಕಾಯಂ ವೈದ್ಯರ ನೇಮಕಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
ವಿರೂಪಾಕ್ಷರೆಡ್ಡಿ ಮುದೇನೂರ,
ಜಿಲ್ಲಾ ಆರೋಗ್ಯಾಧಿಕಾರಿ.

•ಡಿ.ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next