Advertisement

ದೀಪಾವಳಿ ಕಳೆದರೂ ಅತಿಥಿ ಶಿಕ್ಷಕರಿಗಿಲ್ಲ ವೇತನ

12:30 AM Nov 02, 2019 | mahesh |

ಸುಬ್ರಹ್ಮಣ್ಯ: ರಾಜ್ಯದ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರತರಾಗಿರುವ ಸುಮಾರು 25 ಸಾವಿರ ಅತಿಥಿ ಶಿಕ್ಷಕರ ಪಾಲಿಗೆ ಈ ಬಾರಿ ದಸರಾ ಬಿಡಿ, ದೀಪಾವಳಿ ಹಬ್ಬದ ಸಂಭ್ರಮವೂ ಇರಲಿಲ್ಲ. ಇವರಿಗೆ ಐದು ತಿಂಗಳಿಂದ ಸರಕಾರ ಮಾಸಿಕ ಗೌರವಧನ ವೇತನ ನೀಡದಿರುವುದು ಇದಕ್ಕೆ ಕಾರಣ.

Advertisement

ಅತಿಥಿ ಶಿಕ್ಷಕರ ನೇಮಕ
2019-20ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಸರಕಾರವು ಆ ಜೂನ್‌ ತಿಂಗಳಲ್ಲಿ ನೇಮಸಿಕೊಂಡಿತ್ತು. ರಾಜ್ಯದಲ್ಲಿ ಸುಮಾರು 25 ಸಾವಿರ ಅತಿಥಿ ಶಿಕ್ಷಕರಿದ್ದು, ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ 633 ಮತ್ತು ಪ್ರೌಡಶಾಲೆಯಲ್ಲಿ 111 ಮಂದಿಯನ್ನು ನೇಮಿಸಿಕೊಳ್ಳಲಾಗಿದೆ. ಗೌರವ ಧನವಾಗಿ ಪ್ರಾಥಮಿಕ ಶಾಲೆಗೆ ಮಾಸಿಕ 10,500 ಮತ್ತು ಪ್ರೌಢಶಾಲೆಗೆ 12,500 ರೂ. ನಿಗದಿಪಡಿಸಲಾಗಿತ್ತು. ಹಿಂದಿನ ವರ್ಷ 7,500 ರೂ. ನೀಡಲಾಗಿತ್ತು.

ತಾರತಮ್ಯ ಧೋರಣೆ
ಸರಕಾರಿ ಶಿಕ್ಷಕರಿಗೆ ಪ್ರತಿ ತಿಂಗಳ ಒಂದರಂದು ವೇತನ ನೀಡುವ ಸರಕಾರ ಅತಿಥಿ ಶಿಕ್ಷಕರತ್ತ ಮಾತ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಸರಕಾರಿ ಶಿಕ್ಷಕರಿಗಿಂತ ಕಡಿಮೆ ವೇತನ ಪಡೆಯು ತ್ತಿದ್ದರೂ ಜೂನ್‌ ತಿಂಗಳಿಂದ ನಮಗೆ ವೇತನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಂತ್ರಿಕ ತೊಂದರೆ
ತಾಂತ್ರಿಕ ತೊಂದರೆಯಿಂದ ವೇತನ ವಿಳಂಬವಾಗಿದೆ ಎನ್ನುವುದು ಇಲಾಖೆ ನೀಡುವ ಸಬೂಬು. ಆದರೆ ನೈಜ ಕಾರಣ ಆರ್ಥಿಕ ಮುಗ್ಗಟ್ಟು ಕಾರಣ ಎನ್ನಲಾಗುತ್ತಿದೆ. ಇಲಾಖೆ ಅಧಿಕಾರಿಗಳ ಬಳಿ ವಿಚಾರಿಸಿದರೆ ವೇತನ ಶೀಘ್ರ ಬರಲಿದೆ ಎನ್ನುತ್ತಾರೆ. ಬಳ್ಳಾರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಳೆದ ವರ್ಷದ ವೇತನವೇ ಇನ್ನೂ ಪಾವತಿ ಆಗಿಲ್ಲ.

ದಿನಗೂಲಿಗಿಂತ ಕಳಪೆ
ಸರಕಾರಿ ರಜೆ ವೇತನದಲ್ಲಿ ಕಡಿತ ಮಾತ್ರವಲ್ಲದೆ ದಸರಾ ರಜೆಯಲ್ಲಿ 12 ದಿನ ಮಾತ್ರ ಗಣನೆಗೆ ತೆಗೆದು ಕೊಳ್ಳಲಾಗುತ್ತಿದೆ. ಮಾಸಿಕ 1ರಂತೆ ವಾರ್ಷಿಕ ಗಳಿಕೆ ರಜೆ ನೀಡಲಾಗುತ್ತಿದೆ. ಇದರಿಂದ ಮಹಿಳಾ ಶಿಕ್ಷಕಿಯರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ನಮ್ಮನ್ನು ದಿನಗೂಲಿಗಳಿಗಿಂತಲೂ ಕಡೆಯಾಗಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಅತಿಥಿ ಶಿಕ್ಷಕಿಯೊಬ್ಬರ ಅಳಲು.

Advertisement

ಅತಿಥಿ ಶಿಕ್ಷಕರ ವೇತನ ವಿಳಂಬಕ್ಕೆ ಕಾರಣ ಕುರಿತು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು
-ಸುರೇಶ್‌ ಕುಮಾರ್‌
ಶಿಕ್ಷಣ ಸಚಿವರು

ಅತಿಥಿ ಶಿಕ್ಷಕರ ನೇಮಕ ಮತ್ತು ವೇತನ ಇತ್ಯಾದಿ ಜಿಲ್ಲೆಗೆ ಒಂದರಂತೆ ನಿಯಮವಿದೆ. ಸೇವಾಭದ್ರತೆ, ಸಾಮಾಜಿಕ ಭದ್ರತೆ ಯಾವುದೂ ಇಲ್ಲ. ಅತಿಥಿ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಒಗ್ಗಟ್ಟಿನ ಕೊರತೆ ಕೂಡ ಸವಲತ್ತು ಪಡೆಯುವಲ್ಲಿ ವಿಫಲವಾಗಲು ಕಾರಣ.
– ರಾಜೇಶ್‌ ಎಂ.ಡಿ. ಮೈಸೂರು
ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಾ., ಪ್ರೌ. ಅತಿಥಿ ಶಿಕ್ಷಕರ ಸಂಘ, ಬೆಂಗಳೂರು

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next