ಪಿಛೋಡ್ : ‘2019ರ ಲೋಕಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಸಿಗುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಭವಿಷ್ಯ ನುಡಿದ್ದಾರೆ.
‘ಅಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಸಮಾನ ಮನಸ್ಕ ಪಕ್ಷಗಳ ಮೈತ್ರಿ ಕೂಟವನ್ನು ರಚಿಸಿ ಯುಪಿಎ ಪ್ಲಸ್ ಪ್ಲಸ್ ಸರಕಾರವನ್ನು ಕೇಂದ್ರದಲ್ಲಿ ಸ್ಥಾಪಿಸುತ್ತದೆ ಮತ್ತು ಐದು ವರ್ಷಗಳ ಅನ್ಯಾಯವನ್ನು ಕೊನೆಗೊಳಿಸುತ್ತದೆ’ ಎಂದವರು ಹೇಳಿದ್ದಾರೆ.
ಐದು ಬಾರಿಯ ಸಂಸದನಾಗಿ ಮಧ್ಯಪ್ರದೇಶದ ಗುಣ-ಶಿವಪುರಿ ಕ್ಷೇತ್ರದಿಂದ ಇದೀಗ ಮತ್ತೆ ಹೊಸದಾಗಿ ಜನಾದೇಶ ಪಡೆಯಲು ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಂಧ್ಯಾ, ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ‘ಸಮ್ಮಿಶ್ರ ಸರಕಾರಗಳೇ ಇನ್ನು ಮುಂದೆ ಇರುತ್ತವೆ’ ಎಂದು ಹೇಳಿದರು.
‘ಏಳು ಹಂತದ ಲೋಕಸಭಾ ಚುನಾವಣೆಯ ಐದು ಹಂತಗಳು ಮುಗಿದಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸೀಟು ಸಿಗಬಹುದೆಂದು ನೀವು ಭಾವಿಸುವಿರಿ’ ಎಂಬ ಪ್ರಶ್ನೆಗೆ ಸಿಂಧ್ಯ ಅವರು, “ನಾನೆಂದೂ ಅಂಕೆ-ಸಂಖ್ಯೆಗಳನ್ನು ಅಂದಾಜಿಸಲು ಹೋಗುವುದಿಲ್ಲ; ಆದರೆ ಜನರ ಮೂಡ್ ನೋಡುವಾಗ ಅವರು ಹಾಲಿ ಬಿಜೆಪಿ ಸರಕಾರದ ವಿರುದ್ಧ ಇರುವುದನ್ನು ನಾನು ಕಂಡಿದ್ದೇನೆ” ಎಂದು ಉತ್ತರಿಸಿದರು.
“ನನ್ನ ಅಂದಾಜಿನ ಪ್ರಕಾರ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಯುಪಿಎ ಸರಕಾರವನ್ನು ರಚಿಸಲಿದೆ ಮತ್ತು ಸಮ್ಮಿಶ್ರ ಸರಕಾರವನ್ನು ಮುನ್ನಡೆಸುವಲ್ಲಿನ ನಮ್ಮ ನಿರ್ವಹಣೆಯ ಬಗ್ಗೆ ನನಗೆ ವಿಶ್ವಾಸವಿದೆ’ ಎಂದು ಹೇಳಿದರು.
“ಅದೇನಿದ್ದರೂ ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ, ಅದು ಬಿಜೆಪಿಯೇ ಇರಲಿ ಅಥವಾ ಕಾಂಗ್ರೆಸ್ ಪಕ್ಷವೇ ಇರಲಿ, ಯಾರಿಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವುದಿಲ್ಲ’ ಎಂದು ಸಿಂಧ್ಯ ಹೇಳಿದರು.